ಶ್ರೀಮಂಗಲ, ನ. 21: ಪೊನ್ನಂಪೇಟೆ ತಾಲೂಕು ರಚನೆ ಜಿಲ್ಲೆಯ ಗಡಿಭಾಗದ ಗ್ರಾಮಸ್ಥರಾದ ನಮಗೆಲ್ಲರಿಗೂ ಅನಿವಾರ್ಯವಾಗಿದೆ. ಪ್ರಸ್ತುತ ಇರುವ ವೀರಾಜಪೇಟೆ ತಾಲೂಕು ಕಛೇರಿ ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಒಂದುa ದಿನ ಪೂರ್ತಿ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಇದರೊಂದಿಗೆ ಒಂದು ಕೆಲಸಕ್ಕೆ ಹಲವು ಬಾರಿ ಅಲೆದಾಡುವ ಕಷ್ಟವನ್ನು ಸಾರ್ವಜನಿಕರು ಅನುಭವಿಸುತ್ತಿದ್ದಾರೆ. ವೀರಾಜಪೇಟೆ ತಾಲೂಕು ಕಛೇರಿಯಲ್ಲಿ ಸಿಬ್ಬಂದಿಗಳ ಕೊರೆತೆಯಿದ್ದು, ಜಿಲ್ಲೆಯ ಅತಿ ದೊಡ್ಡ ತಾಲೂಕ್ಕಾಗಿ ಗುರುತಿಸಿಕೊಂಡಿರುವ ವೀರಾಜಪೇಟೆಯಲ್ಲಿ ಸಾರ್ವಜನಿಕ ಕೆಲಸ ಹಾಗೂ ಕಡತವಿಲೇವಾರಿ ವಿಳಂಬವಾಗುತ್ತಿದೆ. ಇದನ್ನು ಪರಿಹರಿಸಲು ಇರುವ ಏಕೈಕ ಮಾರ್ಗ ಪೊನ್ನಂಪೇಟೆ ತಾಲೂಕು ರಚನೆ ಎಂದು ಹುದಿಕೇರಿ ಕೊಡವ ಸಮಾಜದ ಖಜಾಂಚಿ ಮಂಡಂಗಡ ಅಶೋಕ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪೊನ್ನಂಪೇಟೆ ತಾಲೂಕು ಪುನರಚನೆಗೆ ಅಗ್ರಹಿಸಿ ಕಳೆದ 21 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಹುದಿಕೇರಿ ಕೊಡವ ಸಮಾಜ, ಅಪ್ಪಚ್ಚಕವಿ ಕೊಡವ ಕೂಟ ಪೊನ್ನಂಪೇಟೆ, ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘ, ಸ್ನೇಹ ಯುವಕ ಸಂಘ ಮಾಪಳೆತೋಡು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸುವದರ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಅಶೋಕ್ ಈಗಾಗಲೇ ಪೊನ್ನಂಪೇಟೆ ತಾಲೂಕು ರಚನೆಗೆ ಬೇಕಾದ ಎಲ್ಲಾ ಪೂರಕ ಸೌಲಭ್ಯಗಳು ಇಲ್ಲಿ ಇದ್ದು ಸರ್ಕಾರದ ಬೊಕ್ಕಸಕ್ಕೆ ಕಡಿಮೆ ವೆಚ್ಚದಲ್ಲಿ ಒಂದು ತಾಲೂಕು ರಚನೆಯಾಗಲಿದೆ. ಇದರೊಂದಿಗೆ ಈ ಭಾಗದ 21 ಗ್ರಾ.ಪಂ ಯಿಂದ ವಿವಿಧ ರೂಪದ ತೆರಿಗೆಗಳು ಸಂದಾಯ ವಾಗಲಿದೆ. ಈ ನಿಟ್ಟಿನಲ್ಲಿ ಸರಕಾರ ಆದಷ್ಟು ಬೇಗನೆ ತಾಲೂಕು ರಚನೆಗೆ ಮುಂದಾಗಬೇಕು. ಇದನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವದು ಎಂದು ಹೇಳಿದರು.
ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಜ್ಜಿಕುಟ್ಟೀರ ಪ್ರವೀಣ್ ಮುತ್ತಪ್ಪ ಮಾತನಾಡಿ ಪ್ರತಿಯೊಂದು ಮೂಲ ಸೌಕರ್ಯ ಗಳಿದ್ದರೂ ಹಲವು ದಶಕಗಳಿಂದ ಹೋರಾಟ ಮಾಡಿಕೊಂಡು ತಾಲೂಕು ರಚನೆಗೆ ಮನವಿ ಸಲ್ಲಿಸಿದರೂ ಸರ್ಕಾರ ತಾಲೂಕು ರಚನೆಗೆ ಮುಂದಾಗದಿರು ವದು ಖಂಡನೀಯ. ಬೆಳಗಾವಿ ಅದಿವೇಶನದ ಒಳಗೆ ಪೊನ್ನಂಪೇಟೆ ತಾಲೂಕು ರಚನೆಗೆ ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ಅಹೋರಾತ್ರಿ ಧರಣಿಗೆ ಪ್ರತಿ ಯೊಬ್ಬರೂ ಮುಂದಾಗಬೇಕೆಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಎಂ.ಎಲ್.ಸಿ ಚೆಪ್ಪುಡೀರ ಅರುಣ್ ಮಾಚಯ್ಯ, ಅಪ್ಪಚ್ಚಕವಿ ಕೊಡವ ಕೂಟದ ಅಧ್ಯಕ್ಷ ಮಚ್ಚಮಾಡ ನಂಜಪ್ಪ, ಮಾತನಾಡಿ ದರು. ಕರ್ನಾಟಕ ಅರಣ್ಯ ನಿಗಮದ ನಿರ್ದೇಶಕ ಚೆಕ್ಕೇರ ವಾಸು ಕುಟ್ಟಪ್ಪ ಕೊಡಗು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಕೆ.ಪೊನ್ನಪ್ಪ, ತಾ.ಪಂ ಸದಸ್ಯೆ ಆಶಾ ಪೂಣಚ್ಚ, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಸುಮಿತಾ ಗಣೇಶ್, ಹುದಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೋದಂಡ ಸನ್ನು ಉತ್ತಪ್ಪ, ಕಾರ್ಯದರ್ಶಿ ಚಕ್ಕೇರ ಹರೀಶ್ ನಂಜಪ್ಪ, ಸದಸ್ಯರಾದ ಹೊಟ್ಟೇಂಗಡ ರವೀಶ್, ಚಕ್ಕೇರ ಅರುಣ್, ಅಜ್ಜಿಕುಟ್ಟೀರ ಬೋಪಣ್ಣ, ಮಲ್ಲಂಗಡ ರಾಜ, ಇಟ್ಟೀರ ಅನಿತಾ ಲಾಲಪ್ಪ, ಬೊಳ್ಳಜ್ಜೀರ ರಾಧ ಕರುಂಬಯ್ಯ, ಅಪ್ಪಚ್ಚಕವಿ ಕೊಡವ ಕೂಟದ ಕಾರ್ಯದರ್ಶಿ ಚಟ್ಟಂಗಡ ಗೀತಾ, ಸದಸ್ಯರಾದ ವಸಂತ, ಮೋಟಯ್ಯ, ನಡಿಕೇರಿ ಗೋವಿಂದ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಕೋಳೇರ ರಾಜ ನರೇಂದ್ರ, ಸ್ನೇಹ ಯುವಕ ಸಂಘದ ಅಧ್ಯಕ್ಷ ಆಲೀರ ಎಂ.ಅಬ್ದುಲ್ ರಶೀದ್, ಪ್ರವೀಣ್ ಮುತ್ತಪ್ಪ, ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷರು ಹಾಗೂ ಸದಸ್ಯರು ಪೊನ್ನಂಪೇಟೆ ತಾಲೂಕು ಪುನರಚನಾ ಸಮಿತಿಯ ಪ್ರಮುಖರು ಭಾಗವಹಿಸಿದ್ದರು.
ಹುದಿಕೇರಿ ಕೊಡವ ಸಮಾಜದ ವತಿಯಿಂದ ಪೊನ್ನಂಪೇಟೆ ತಾಲೂಕು ಪುನರಚನೆಗೆ ಆಗ್ರಹಿಸಿ ಉಪತಹಶೀಲ್ದಾರ್ ಶಶೀಧರ್ ಅವರಿಗೆ ಮನವಿ ಪತ್ರವನ್ನು ಈ ಸಂದರ್ಭದಲ್ಲಿ ಸಲ್ಲಿಸಲಾಯಿತು.