ಮಡಿಕೇರಿ, ನ. 21 : ಬೆಂಗೂರು ಜೀರೋಯಿನ್ ಮ್ಯಾನೇಜ್‍ಮೆಂಟ್ ಸಂಸ್ಥೆಯು ಬೆಂಗಳೂರಿನಿಂದ ಮಡಿಕೇರಿಗೆ ತಾ. 24 ರಿಂದ ತಾ. 26ರವೆಗೆ ಮಹಿಳಾ ಕಾರು ರ್ಯಾಲಿಯನ್ನು ಆಯೋಜಿಸಿದೆ ಎಂದು ಸಂಸ್ಥೆಯ ಪ್ರೋಜೆಕ್ಟ್ ಹೆಡ್ ವಿವೇಕ್ ತಿಳಿಸಿದ್ದಾರೆ.

ತಾ. 24ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಸೇಂಟ್ ಮಾಕ್ರ್ಸ್ ರಸ್ತೆಯಲ್ಲಿರುವ ಬೌರಿಂಗ್ ಇನ್‍ಸ್ಟಿಟ್ಯೂಟ್‍ನಲ್ಲಿ ಹಸಿರು ನಿಶಾನೆ ದೊರೆಯಲಿದೆ. ಮಿಸಸ್ ಇಂಡಿಯಾ - 2017ರ ಮುಖ್ಯ ಅತಿಥಿಯಾಗಿದ್ದ ತೃಪ್ತಿರಾವ್, ವನಿತಾ ಅಶೋಕ್, ಅನಿತಾ ಬೋಲೆ, ದೀಪಿಕಾ, ತ್ರೆಹಾನ್ ಮತ್ತಿತರರು ಉದ್ಘಾಟನೆ ಸಂದರ್ಭ ಭಾಗವಹಿಸಲಿದ್ದಾರೆ.

ವಿವಿಧ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವ, ಚಾಲನೆಯಲ್ಲಿ ಆಸಕ್ತಿಯಿರುವ ಮಹಿಳೆಯರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ರ್ಯಾಲಿ ಆಯೋಜಿಸಿದ್ದು, ಮಹಿಳೆಯರಿಗೆ ಇದೊಂದು ಉತ್ತಮ ಅವಕಾಶವಾಗಲಿದೆ. ರ್ಯಾಲಿಯನ್ನು ಕರ್ನಾಟಕ ಮೋಟಾರ್ಸ್ ಸ್ಪೋಟ್ರ್ಸ್ ಕ್ಲಬ್ ಸಹಯೋಗದೊಂದಿಗೆ ಆಯೋಜಿಸಿದ್ದು, ಕ್ಲಬ್ ರಸ್ತೆಯ ನಕ್ಷೆಯನ್ನು ಸಿದ್ಧಪಡಿಸಿದೆ. ರ್ಯಾಲಿಯು ಬೆಂಗಳೂರಿನಿಂದ ರಾಮನಗರ, ಮಂಡ್ಯ, ಬಿಳಿಕೆರೆ, ಕುಶಾಲನಗರ ಮಾರ್ಗವಾಗಿ ಮಡಿಕೇರಿ ತಲುಪಲಿದೆ. ದಾರಿಯುದ್ದಕ್ಕೂ ರಸ್ತೆ ಸುರಕ್ಷತೆ ಅರಿವು ಮೂಡಿಸಲಾಗುವದು. ತಾ. 25ರಂದು ರಾತ್ರಿ ಮಡಿಕೇರಿಯಲ್ಲಿ ಉಳಿಯಲಿದ್ದು, ತಾ. 26ರಂದು ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿಗೆ ಹಿಂದಿರುಗಿ ಅಂದು ಸಂಜೆ ಬೆಂಗಳೂರಿನಲ್ಲಿ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.