ಕೂಡಿಗೆ, ನ. 21: ಕುಶಾಲನಗರ ಚೈಲ್ಡ್‍ಲೈನ್ ಸಂಸ್ಥೆಯ ವತಿಯಿಂದ ಶಿರಂಗಾಲ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸಾಮಾಜಿಕ ಜಾಲತಾಣಗಳ ಸುರಕ್ಷತೆ ಹಾಗೂ ಮಾದಕ ವಸ್ತುಗಳ ವಿರುದ್ಧದ ಮಾಹಿತಿ ಕಾರ್ಯಾಗಾರ ಮತ್ತು ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿ ಮಹೇಶ್ ಮಾತನಾಡಿ, ಜನರ ಮತ್ತು ಸಮಾಜದ ಒಳಿತಿಗಾಗಿ ಆವಿಷ್ಕಾರಗೊಳ್ಳುತ್ತಿರುವ ಸಾಮಾಜಿಕ ಜಾಲತಾಣದ ವ್ಯವಸ್ಥೆಯನ್ನು ಅವಶ್ಯಕತೆಗಾಗಿ ಮಾತ್ರ ಬಳಸಬೇಕು. ಆದರೆ ಇಂದಿನ ಯುವಜನತೆ ದುರ್ಬಳಕೆ ಮಾಡಿ ಕೊಳ್ಳುತ್ತಿದ್ದಾರೆ. ಇವುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಯುವ ಜನತೆಗೆ ತಿಳಿಸಿಕೊಡುವ ಕಾರ್ಯವನ್ನು ಮಾಡುವಂತಹ ಪರಿಸ್ಥಿತಿ ಎದುರಾಗಿದೆ ಎಂದರು.
ಮಾದಕ ಸೇವನೆಯಿಂದ ಆಗುವ ಸಮಸ್ಯೆಗಳ ಬಗ್ಗೆ ಮತ್ತು ಮಾದಕ ವಸ್ತುಗಳಂತಹ ದುಶ್ಚಟಗಳಿಂದ ಯುವ ಸಮೂಹ ವಿದ್ಯಾರ್ಥಿಗಳು ದೂರ ಇರುವಂತೆ ಸಲಹೆ ನೀಡಿದರು. ಹಾಗೂ ಕಾನೂನು ನಿಯಮಗಳಿರುವ ಬಗ್ಗೆ ಮಾಹಿತಿ ನೀಡಿದರು.
ಚೈಲ್ಡ್ ಲೈನ್ ಸಂಸ್ಥೆಯ ನವೀನ್ ಮಾತನಾಡಿ, ಇಂದಿನ ಯುವಪೀಳಿಗೆ ಹಾಗೂ ವಿದ್ಯಾರ್ಥಿ ಸಮೂಹ ಆಧುನಿಕವಾಗಿ ಆವಿಷ್ಕಾರಗೊಂಡಿರುವ ಮಾಹಿತಿ ತಂತ್ರಜ್ಞಾನದ ವ್ಯವಸ್ಥೆಗೆ ಜೋತು ಬಿದ್ದಿದ್ದು, ಜನರ ಒಳಿತಿಗಾಗಿ ಆವಿಷ್ಕಾರಗೊಂಡಿರುವ ಸಾಮಾಜಿಕ ಜಾಲತಾಣದಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ವೇಗವಾಗಿ ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದ ಸುರಕ್ಷತೆ ಮಾಡಿಕೊಳ್ಳುವ ಬಗ್ಗೆ ಹಾಗೂ ಸಾಮಾಜಿಕ ಜಾಲತಾಣದ ಒಳಿತು ಕೆಡುಕುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಯುವ ಸಮುದಾಯಕ್ಕೆ ಜಾಗೃತಿ ಮೂಡಿಸುವ ಉದ್ದೇಶದಿಂದ ಚೈಲ್ಡ್‍ಲೈನ್ ಸಂಸ್ಥೆಯ ವತಿಯಿಂದ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಶಿಕ್ಷಕ ಸೋಮಯ್ಯ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಂಜುನಾಥ್, ಪ್ರಮುಖರಾದ ಮೋಹನ್‍ಕುಮಾರ್, ಚೈಲ್ಡ್‍ಲೈನ್ ಸಂಸ್ಥೆಯ ತಾಲ್ಲೂಕು ಕಾರ್ಯಕರ್ತೆ ಬಿ.ಕೆ.ಕುಸುಮಾ, ಪೊಲೀಸ್ ಸಿಬ್ಬಂದಿ ತೇಜಸ್ವಿನಿ ಮತ್ತಿತರರು ಇದ್ದರು.
ಜನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಚೈಲ್ಡ್‍ಲೈನ್ ಸಂಸ್ಥೆಯ ಸಿಬ್ಬಂದಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು.