ವೀರಾಜಪೇಟೆ, ನ.21: ಮಕ್ಕಳು ಪ್ರಥಮ ಪರಮ ಪ್ರಸಾದದ ಸ್ವೀಕಾರದ ನಂತರ ಶ್ರದ್ಧಾ ಭಕ್ತಿಯಿಂದ ಶುದ್ಧ ಮನಸ್ಸಿನಿಂದ ವ್ರತದ ಆಚರಣೆ ಯೊಂದಿಗೆ ಶ್ರದ್ಧೆ, ದಕ್ಷತೆ ಪ್ರಾಮಾಣಿ ಕತೆಯನ್ನು ಮೈಗೂಡಿಸಿಕೊಂಡು ಭವಿಷ್ಯದ ಉತ್ತಮ ಪ್ರಜೆಯಾಗಬೇಕು. ಧಾರ್ಮಿಕತೆಗೂ ಆದ್ಯತೆ ನೀಡುವಂತಾಗಬೇಕು ಎಂದು ಬೆಳ್ತಂಗಡಿ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ಡಾ. ಲಾರೆನ್ಸ್ ಮುಕ್ಕಝಿ ಹೇಳಿದರು.

ಇಲ್ಲಿನ ಸಂತ ಅನ್ನಮ್ಮ ದೇವಾಲಯದ 225ನೇ ಮಹೋತ್ಸವದ ಅಂಗವಾಗಿ ಸಂಜೆ ದೇವಾಲಯದಲ್ಲಿ ದಿವ್ಯ ಬಲಿಪೂಜೆಯ ನಂತರ ಧಾರ್ಮಿಕ ಸಾಂಪ್ರದಾಯಿಕವಾಗಿ

21 ಮಕ್ಕಳಿಗೆ ಪ್ರಥಮ ಪರಮ ಪ್ರಸಾದ ನೀಡಿದ ನಂತರ ಸಮುದಾಯ ಬಾಂಧವರನ್ನು ಉದ್ದೇಶಿಸಿ ಮಾತನಾಡಿದ ಅವರು ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯಕ್ಕೆ 225 ವರ್ಷಗಳು ಸಂದಿರುವದು ಇಲ್ಲಿನ ಜನತೆಗೆ ಹೆಮ್ಮೆಯ ವಿಷಯ. ದೇವರ ಆಶೀರ್ವಾದ ಜನತೆಯ ಮೇಲಿರಲಿ. ಪಟ್ಟಣ ಸಮೃದ್ಧಿಯತ್ತ ಸಾಗಲಿ ಎಂದು ಶುಭ ಹಾರೈಸಿದರು.

ಲಾರೆನ್ಸ್ ಮುಕ್ಕುಝಿ ಧರ್ಮಾಧ್ಯಕ್ಷರನ್ನು ಇಲ್ಲಿನ ಶಾಂತಾ ಚಿತ್ರಮಂದಿರದ ಬಳಿ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಸಂಚಾಲಕ ರೆ:ಫಾ: ಮದಲೈ ಮುತ್ತು, ಧರ್ಮಾಧಿಕಾರಿಗಳಾದ ಜೋನಸ್, ರೋಷನ್ ಬಾಬು, ಪ್ರಿನ್ಸ್ ಸ್ವಾಗತಿಸಿ ವಾದ್ಯಗೋಷ್ಠಿ ಮೂಲಕ ಸಂತ ಅನ್ನಮ್ಮ ದೇವಾಲಯಕ್ಕೆ ಬರ ಮಾಡಿಕೊಂಡರು. ನಂತರ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.