ಮಡಿಕೇರಿ, ನ. 21 : ಇಲ್ಲಿನ ಲಾಡ್ಜ್‍ವೊಂದರಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಓರ್ವ ಮಹಿಳೆ ಸೇರಿದಂತೆ ನಾಲ್ವರನ್ನು ಭಾಗಮಂಡಲ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಒಡಿಸ್ಸಾ ಮೂಲದ ಮಹಿಳೆಯೊಂದಿಗೆ ಸಹೋದ್ಯೋಗಿ ಹುಣಸೂರಿನ ಮಹಮ್ಮದ್ ಜಾಹೀದ್, ರಾಜಿಕ್ ಹಾಗೂ ಲಾಡ್ಜ್ ಮಾಲೀಕರನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನಿಂದ ಹುಣಸೂರಿಗೆ ಬಂದಿದ್ದ ಮಹಿಳೆ ಹಾಗೂ ಮಹಮ್ಮದ್ ಜಾಹೀದ್ ಭಾನುವಾರ ರಾಜಿಕ್ ಎಂಬವನ (ಕೆಎ03 ಎಂಪಿ 0699) ಕಾರಿನಲ್ಲಿ ಭಾಗಮಂಡಲಕ್ಕೆ ಆಗಮಿಸಿದ್ದು, ಭಾಗಮಂಡಲಕ್ಕೆ ತಲುಪುವಷ್ಟರಲ್ಲಿ ಕಾರು ರಿಪೇರಿಯಾಗಿದೆ ಎನ್ನಲಾಗಿದೆ. ಬಳಿಕ ಇಲ್ಲಿನ ಲಾಡ್ಜ್‍ವೊಂದರಲ್ಲಿ ಮೂವರು ಒಂದು ರೂಂ ಪಡೆದು ಉಳಿದಿದ್ದರು. ಸೋಮವಾರ ಇವರ ನಡವಳಿಕೆಯಿಂದ ಸಂಶಯಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿಯಿತ್ತಿದ್ದು, ಡಿವೈಎಸ್ಪಿ ಸುಂದರ್‍ರಾಜ್ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಸದಾಶಿವ ಹಾಗೂ ಸಿಬ್ಬಂದಿಗಳು ಲಾಡ್ಜ್‍ಗೆ ಧಾಳಿ ಮಾಡಿದ್ದು, ಈ ಸಂದರ್ಭ ಕಾರು ಚಾಲಕ ರಾಜಿಕ್ ತಪ್ಪಿಸಿಕೊಂಡಿದ್ದು, ಮಹಿಳೆಯೊಂದಿಗಿದ್ದ ಮಹಮ್ಮದ್ ಜಾಹೀರ್ ವಶಕ್ಕೆ ಪಡೆದಿದ್ದಾರೆ. ಬಳಿಕ ಇಂದು ತಪ್ಪಿಸಿಕೊಂಡು ತೆರಳಿದ್ದ ರಾಜಿಕ್ ತನ್ನ ಕಾರನ್ನು ತೆಗೆದುಕೊಂಡು ಹೋಗಲು ಬಸ್ಸಿನಲ್ಲಿ ಬರುತ್ತಿದ್ದಾಗ ಇಲ್ಲಿನ ಪೆಟ್ರೋಲ್ ಬಂಕ್ ಬಳಿ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಲಾಡ್ಜ್ ಮಾಲೀಕರು ಆರೋಪಿಗಳೀಗೆ ರೂಮ್ ನೀಡುವಾಗ ಸರಿಯಾದ ದಾಖಲೆ ಪಡೆದುಕೊಂಡಿಲ್ಲ ಎಂಬ ಆರೋಪದ ಮೇಲೆ ವಶಕ್ಕೆ ಪಡೆದು ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.