ಮಡಿಕೇರಿ, ನ. 21: ಕೊಡಗು ಜಿಲ್ಲಾ ಯುವ ಒಕ್ಕೂಟದ ವತಿಯಿಂದ ತಾ. 27 ರಂದು 2017-18ನೇ ಸಾಲಿನ ಜಿಲ್ಲಾ ಯುವ ಜನೋತ್ಸವ ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ನಡೆಯಲಿದೆ ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಮಂಡುವಂಡ ಜೋಯಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ, ಕೊಡಗು ಜಿಲ್ಲಾ ಪಂಚಾಯಿತಿ ಹಾಗೂ ಮೂರು ತಾಲೂಕುಗಳ ಯುವ ಒಕ್ಕೂಟಗಳ ಆಶ್ರಯದಲ್ಲಿ ಜಿಲ್ಲಾ ಯುವ ಜನೋತ್ಸವ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಯುವಜನ ಮೇಳ, ಯುವ ಸಮ್ಮೇಳನ, ಕಾರ್ಯಾಗಾರ, ತರಬೇತಿ ಮತ್ತು ಜಿಲ್ಲಾ ಯುವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು.
ಜಿಲ್ಲಾ ಯುವ ಜನೋತ್ಸವದಲ್ಲಿ 15 ರಿಂದ 35 ವರ್ಷದ ಒಳಗಿನವರು ಪಾಲ್ಗೊಳ್ಳಲು ಅವಕಾಶವಿದೆ. ಪ್ರಮುಖವಾಗಿ ಯುವಕ-ಯುವತಿಯರಿಗೆ ಜಾನಪದ ನೃತ್ಯ, ಜಾನಪದ ಗೀತೆ, ಏಕಾಂಗ ನಾಟಕ, ಶಾಸ್ತ್ರೀಯ ಗಾಯನ, ಶಾಸ್ತ್ರೀಯ ವಾದನ, ಗಿಟಾರ್, ಶಾಸ್ತ್ರೀಯ ನೃತ್ಯ, ಹಾರ್ಮೋನಿಯಂ ಹಾಗೂ ಆಶುಭಾಷಣ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದವರು ತಾ. 30 ರಿಂದ ಡಿಸೆಂಬರ್ 2 ರವರೆಗೆ ಉಡುಪಿಯಲ್ಲಿ ನಡೆಯುವ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಯುವ ಜನೋತ್ಸವದಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಬೆಳಿಗ್ಗೆ 9.30 ಗಂಟೆಗೆ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬೇಕೆಂದು ತಿಳಿಸಿದ ಎಂ.ಬಿ. ಜೋಯಪ್ಪ, ಹೆಚ್ಚಿನ ಮಾಹಿತಿಗಾಗಿ ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ ಮೊ. 9740404520, ಸೋಮವಾರಪೇಟೆ ಅಧ್ಯಕ್ಷ ಶೋಭರಾಜ್ ಮೊ.9483834907, ವೀರಾಜಪೇಟೆ ಅಧ್ಯಕ್ಷೆ ಶೀಲಾ ಬೋಪಣ್ಣ ಮೊ.9480753610 ಸಂಪರ್ಕಿಸಬಹುದೆಂದು ತಿಳಿಸಿದರು.
ಯುವ ಭವನ ಬೇಕು
ಮಹಿಳಾ ಕಾಲೇಜಿಗೆ ಒದಗಿಸಿದ್ದ ಕೊಡಗು ಜಿಲ್ಲಾ ಯುವ ಭವನವನ್ನು ಮರಳಿ ಯುವ ಒಕ್ಕೂಟಕ್ಕೆ ನೀಡುವಂತೆ ಕಳೆದ ಜೂನ್ 9 ರಂದು ಪ್ರತಿಭಟನೆ ನಡೆಸಿ ಆರು ತಿಂಗಳ ಗಡುವನ್ನು ನೀಡಲಾಗಿತ್ತು. ಈ ಅವಧಿ ಪೂರ್ಣಗೊಳ್ಳುವ ಹಂತದಲ್ಲೂ ಯುವ ಭವನ ದೊರಕದಿರುವ ಹಿನ್ನೆಲೆ ಜೋಯಪ್ಪ ಬೇಸರ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಮಹಿಳಾ ಕಾಲೇಜಿಗೆ ಬಳಸಿಕೊಳ್ಳುತಿರುವದಕ್ಕೆ ಯುವ ಭವನಕ್ಕೆ ಬಾಡಿಗೆ ನೀಡಬೇಕು ಮತ್ತು ಮಹಿಳಾ ಕಾಲೇಜನ್ನು ಶೀಘ್ರ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಯುವ ಒಕ್ಕೂಟದ ಕಾರ್ಯದರ್ಶಿ ಪಿ.ಪಿ. ಸುಕುಮಾರ್ ಉಪಸ್ಥಿತರಿದ್ದರು.