ಶ್ರೀಮಂಗಲ, ನ. 21: ಟಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ರೂ. 72 ಲಕ್ಷದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯತ್ ಸದಸ್ಯ ಮುಕ್ಕಾಟಿರ ಶಿವು ಮಾದಪ್ಪರವರು ಭೂಮಿ ಪೂಜೆ ಸಲ್ಲಿಸಿದರು.
ಗ್ರಾ.ಪಂ.ಯ ದುರ್ಗಿ ದೇವಸ್ಥಾನ ರಸ್ತೆಗೆ ಕಾಂಕ್ರೀಟ್, ವೆಸ್ಟ್ ನೆಮ್ಮಲೆ ತುಂಬೆಕಾಡ್ ರಸ್ತೆ, ವೆಸ್ಟ್ ನೆಮಲ್ಲೆ ಆನೆಕಪ್ಪ ರಸ್ತೆಗೆ ಕಾಂಕ್ರೀಟ್, ಹಾಗೂ ವೆಸ್ಟ್ ನೆಮ್ಮಲೆ-ತೆರಾಲು-ನೆಮ್ಮಲೆ ಬೀರುಗ ಗ್ರಾಮಗಳ ಸಂಪರ್ಕ ರಸ್ತೆ ಡಾಂಬರೀಕರಣ ಕಾಮಗಾರಿ ಈ ಅನುದಾನದಲ್ಲಿ ಸೇರಿದೆ ಎಂದು ಜಿ.ಪಂ. ಸದಸ್ಯ ಶಿವು ಮಾದಪ್ಪ ತಿಳಿಸಿದರು.
ಈ ಸಂದರ್ಭ ಮಾತನಾಡಿದ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಮನೋವರಿಕೆ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಗೆ ಮೂರು ಹಂತದಲ್ಲಿ ಅನುದಾನ ಬಿಡುಗಡೆಯಾಗಿದೆ. ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್ನಲ್ಲಿ ಮೊದಲ ಹಂತದಲ್ಲಿ 35 ಕೋಟಿ, ಎರಡನೇ ಹಂತದಲ್ಲಿ 50 ಕೋಟಿ ಬಿಡುಗಡೆಯಾಗಿದೆ. ಮೂರನೇ ಹಂತದಲ್ಲಿ ಮತ್ತೆ 50 ಕೊಟಿ ಅನುದಾನ ಸಧ್ಯದಲ್ಲಿಯೇ ಬಿಡುಗಡೆಯಾಗಲಿದೆ. ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆಗಾಗಿ ವಿಶೇಷವಾಗಿ ಹಣವನ್ನು ಜಿಲ್ಲೆಗೆ ಬಿಡುಗಡೆ ಮಾಡಿದೆ ಎಂದು ಹೇಳಿದರು.
ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯ ಚೆಪ್ಪುಡಿರ ಅರುಣ್ ಮಾಚಯ್ಯ, ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪೆಮ್ಮಂಡ ಪೊನ್ನಪ್ಪ, ತಾ.ಪಂ. ಸದಸ್ಯ ಪಲ್ವಿನ್ ಪೂಣಚ್ಚ, ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ, ಟಿ.ಶೆಟ್ಟಿಗೇರಿ ಗ್ರಾ.ಪಂ ಅಧ್ಯಕ್ಷ ಮಚ್ಚಮಾಡ ಸುಮಂತ್, ಟಿ.ಶೆಟ್ಟಿಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಚೊಟ್ಟೆಯಂಡಮಾಡ ವಿಶು, ಶ್ರೀಮಂಗಲ ವಲಯ ಕಾಂಗ್ರೆಸ್ ಅಧ್ಯಕ್ಷ ಕುಂಞಂಗಡ ಬೋಸ್ ಮಾದಪ್ಪ, ಕಾಂಗ್ರೆಸ್ ಹಿರಿಯ ಮುಖಂಡ ಅಪ್ಪಚ್ಚಂಗಡ ಮೋಟಯ್ಯ, ಗ್ರಾ.ಪಂ ಸದಸ್ಯ ಚೊಟ್ಟೆಯಂಡಮಾಡ ಉದಯ, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಮಾಣೀರ ಮಂಜು ಸೋಮಯ್ಯ, ಬೊಟ್ಟಂಗಡ ಈಶ್ವರ, ಚೊಟ್ಟೆಯಂಡಮಾಡ ದಿನೇಶ್, ಬೋಸು, ನಿಶಾನ್, ಗ್ರಾ.ಪಂ ಸದಸ್ಯ ಪೆಮ್ಮಂಡ ರಾಜ, ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಮುಕ್ಕಾಟೀರ ಸಂದೀಪ್, ಸೇರಿದಂತೆ ಪ್ರಮುಖರು ಹಾಜರಿದ್ದರು.