ಸಿದ್ದಾಪುರ, ನ.21 : ಪಾಲಿಬೆಟ್ಟ ಸಮೀಪದ ಮೇಕೂರು ಹೊಸ್ಕೆರಿಗ್ರಾಮದ ಖಾಸಗಿ ಕಾಫಿ ತೋಟದಲ್ಲಿ ಅಕ್ರಮವಾಗಿ ಮರಗಳನ್ನು ಕಡಿದು ಸಾಗಾಟಕ್ಕೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಸಿದ್ದಾಪುರದ ಯಾಹ್ಯ ಎಂಬಾತನಿಗೆ ಸೇರಿದ ಮರದ ಪೀಠೋಪಕರಣದ ಮಳಿಗೆಗೆ ಅರಣ್ಯ ಇಲಾಖಾಧಿಕಾರಿಗಳು ಮಂಗಳವಾರದಂದು ಧಾಳಿ ನಡೆಸಿದರು.
ಕಳೆದ ಎರಡು ದಿನಗಳ ಹಿಂದೆ ಪಾಲಿಬೆಟ್ಟ ಸಮೀಪದ ಮೇಕೂರು ಹೊಸ್ಕೆರಿ ಗ್ರಾಮದ ಕಾಫಿ ತೋಟದ ಮರ ಕಡಿದು ಅಕ್ರಮವಾಗಿ ಸಾಗಾಟಕ್ಕೆ ಯತ್ನಿಸಿದ ಸಂದರ್ಭ ಅರಣ್ಯ ಇಲಾಖಾಧಿಕಾರಿಗಳು ಕಾರ್ಯಚರಣೆ ನಡೆಸಿದ್ದರು. ಈ ಸಂದರ್ಭ ಅಕ್ರಮ ಸಾಗಾಟಕ್ಕೆ ಬಳಸಿದ 4 ವಾಹನಗಳು ಹಾಗೂ 4 ಮಂದಿ ಆರೋಪಿಗಳನ್ನು ಅರಣ್ಯ ಇಲಾಖಾಧಿಕಾರಿಗಳು ಬಂಧಿಸಿದ್ದರು. ಅಲ್ಲದೇ ಅಕ್ರಮವಾಗಿ ಸಾಗಾಟಕ್ಕೆ ಸಿದ್ಧಪಡಿಸಿದ್ದ ಮರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸಂದರ್ಭ ಮರ ಸಾಗಾಟದಲ್ಲಿ ಭಾಗಿಯಾಗಿದ್ದ ಸಿದ್ದಾಪುರದ ಮರ ವ್ಯಾಪಾರಿ ಯಾಹ್ಯ ತಲೆಮರಿಸಿಕೊಂಡಿದ್ದ.
ಈ ಹಿನ್ನೆಲೆಯಲ್ಲಿ ಆತನಿಗೆ ಸೇರಿದ ಸಿದ್ದಾಪುರದ ಎಂ.ಜಿ. ರಸ್ತೆಯಲ್ಲಿರುವ ಮರದ ಪೀಠೋಪಕರಣಗಳನ್ನು ತಯಾರಿಸುವ ಹಾಗೂ ಮರಗಳನ್ನು ದಾಸ್ತನು ಮಾಡಿದ ಗೊದಾಮಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಧಾಳಿ ನಡೆಸಿದರು. ಧಾಳಿ ನಡೆಸುವ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿ ಗೊದಾಮಿನ ಬೀಗವನ್ನು ಒಡೆದು ಹಾಕಿ ಒಳನುಗ್ಗಿ ಮರಗಳ ದಾಸ್ತನುವಿನ ಬಗ್ಗೆ ಪರಿಶೀಲನೆ ನಡೆಸಿದ್ದರು. ಅಲ್ಲದೆ ಪೀಠೋಪಕರಣ ತಯಾರಿಸುವ ಕೊಠಡಿಗೆ ಹಾಗೂ ಮರ ದಾಸ್ತನು ಮಾಡಿದ ಕೊಠಡಿಗೆ ಬೀಗವನ್ನು ಜಡಿಯಲಾಗಿದೆ. ಆರೋಪಿ ಯಾಹ್ಯ ತಲೆಮರೆಸಿಕೊಂಡಿದ್ದು, ಮರಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಈ ಸಂದರ್ಭ ವೀರಾಜಪೇಟೆ ಡಿಎಫ್ಓ ಮರಿಯಕೃಷ್ಣರಾಜ್, ಮಡಿಕೇರಿ ಡಿ.ಎಫ್.ಓ ಸೂರ್ಯಸೇನ್, ಉಪವಲಯ ಅರಣ್ಯಾಧಿಕಾರಿಗಳಾದ ದೇವಯ್ಯ, ರಂಜನ್, ಬಾನಂಡ ದೇವಿಪ್ರಸಾದ್, ಸಿಬ್ಬಂದಿಗಳಾದ ಗಣೇಶ್ ಹಾಗೂ ಆರ್.ಆರ್.ಟಿ ಸಿಬ್ಬಂದಿಗಳು ಇದ್ದರು.