ಶನಿವಾರಸಂತೆ, ನ. 21: ಕೆಎಸ್‍ಆರ್‍ಟಿಸಿ ಬಸ್ ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ನಿವೃತ್ತ ಎಸ್‍ಐ ಸ್ಥಳದಲ್ಲಿ ಮೃತಪಟ್ಟಿದ್ದು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಿಗ್ಗೆ ಕೊಡಗು-ಹಾಸನ ಗಡಿಭಾಗದ ಯಸಳೂರಿನ ಮಾವಿನಮರ ಜಂಕ್ಷನ್‍ನಲ್ಲಿ ನಡೆದಿದೆ. ಕೊಡ್ಲಿಪೇಟೆ ನಿವಾಸಿ ನಿವೃತ್ತ ಎಸ್‍ಐ ಮಲ್ಲಿಕಾರ್ಜುನ (61) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ.
ಮಲ್ಲಿಕಾರ್ಜುನ ಬೆಳಿಗ್ಗೆ 10.30 ಗಂಟೆ ಸುಮಾರಿಗೆ ಕೊಡ್ಲಿಪೇಟೆಯಲ್ಲಿರುವ ತಮ್ಮ ಮನೆಯಿಂದ ಯಸಳೂರು ಸಮೀಪದ ಕೆರೋಡಿ ಗ್ರಾಮದಲ್ಲಿರುವ ಕಾಫಿ ತೋಟವನ್ನು ವೀಕ್ಷಣೆ ಮಾಡುವ ಸಲುವಾಗಿ ಎಂದಿನಂತೆ ತನಗೆ ಸೇರಿದ ಹೊಂಡ ಸ್ಪ್ಲೆಂಡರ್ ಬೈಕ್‍ನಲ್ಲಿ ಹೋಗಿದ್ದಾರೆ. ತೋಟವನ್ನು ವೀಕ್ಷಣೆ ಮಾಡಿದ ನಂತರ ಮನೆಗೆ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ಅವರು ಕೆರೋಡಿ ಗ್ರಾಮದ ತನ್ನ ಸ್ನೇಹಿತನಾದ ಕೃಷ್ಣೇಗೌಡ (70) ಎಂಬವರನ್ನು ಬೈಕಿನ ಹಿಂಬದಿಯಲ್ಲಿ ಕೂರಿಸಿಕೊಂಡು ಕೆಲಸದ ನಿಮಿತ್ತ ಯಸಳೂರು ಕಡೆಗೆ ಹೊರಟಿದ್ದಾರೆ.
ಬೈಕ್ ಯಸಳೂರು ಸಮೀಪದ ಮಾವಿನಮರ ಜಂಕ್ಷನ್ ಬಳಿ ಬರುತ್ತಿದ್ದ ವೇಳೆಯಲ್ಲಿ ಚಂಗಡಹಳ್ಳಿ, ಯಸಳೂರು ಮಾರ್ಗವಾಗಿ ಕೊಡ್ಲಿಪೇಟೆ ಕಡೆಗೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಎದುರಿಗೆ ಬರುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬೈಕ್ ಚಲಾಯಿಸುತ್ತಿದ್ದ ಮಲ್ಲಿಕಾರ್ಜುನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಲೆ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿರುವ ಕೃಷ್ಣೇಗೌಡ ಅವರನ್ನು ಹಾಸನದ ಆಸ್ಪತ್ರೆಗೆ ಸಾಗಿಸಿದ್ದಾರೆ.
ಕೊಡ್ಲಿಪೇಟೆ ನಿವಾಸಿ ಯಾದ ಮಲ್ಲಿಕಾರ್ಜುನ ಕುಶಾಲನಗರದಲ್ಲಿ ಎಸ್‍ಐ ಆಗಿ ಸೇವೆ ಸಲ್ಲಿಸಿ ಕಳೆದ 8 ತಿಂಗಳ ಹಿಂದೆಯಷ್ಟೇ ನಿವೃತ್ತಿ ಹೊಂದಿದರು. ಅವರ ಒಬ್ಬನೆ ಪುತ್ರ ಕಳೆದ 6 ತಿಂಗಳ ಹಿಂದೆ ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಸ್ನೇಹಿತರ ಜೊತೆಯಲ್ಲಿ ಈಜಲು ಹೋದ ಸಂದರ್ಭದಲ್ಲಿ ಮೃತಪಟ್ಟಿದ್ದ. ಯಸಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.