ಸೋಮವಾರಪೇಟೆ,ನ.21: ಗ್ರಾಮಸ್ಥರೋರ್ವರ ಮನೆಯಲ್ಲಿ ನಡೆದ ಸಮಾರಂಭಕ್ಕೆ ಸಿದ್ಧಪಡಿಸಿದ್ದ ಅಡುಗೆಯಲ್ಲಿ ಉಳಿಕೆಯಾದ ಅನ್ನ ಮತ್ತು ಸಾಂಬಾರ್‍ನ್ನು ಸರ್ಕಾರದ ಮಾತೃಪೂರ್ಣ ಯೋಜನೆಯ ಫಲಾನುಭವಿಗಳಿಗೆ ಅಂಗನವಾಡಿ ಮೂಲಕ ವಿತರಿಸಿದ ಆರೋಪ ಕೇಳಿ ಬಂದಿದ್ದು, ಗ್ರಾಮಸ್ಥರು ಇಲಾಖೆಗೆ ತೆರಳಿ ಅಧಿಕಾರಿಯನ್ನು ತರಾಟೆಗೆತ್ತಿ ಕೊಂಡ ಘಟನೆ ಇಂದು ನಡೆಯಿತು.

ಸಮೀಪದ ಮಸಗೋಡು ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಸಹಾಯಕಿಯಾಗಿರುವ ಮಹಿಳೆ ತನ್ನ ಸಂಬಂಧಿಕರ ಮನೆಯಲ್ಲಿ ನಡೆದ ಸಮಾರಂಭಕ್ಕೆ ಸಿದ್ಧಪಡಿಸಿದ್ದ ಅಡುಗೆಯಲ್ಲಿ ಮಿಕ್ಕಿದ ಅನ್ನ ಮತ್ತು ಸಾಂಬಾರ್‍ನ್ನು ಇಂದು ಅಂಗನವಾಡಿ ಮೂಲಕ ವಿತರಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಗ್ರಾಮಸ್ಥರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎದುರು ಆಕ್ರೋಶ ಹೊರಹಾಕಿದರು.

ಮಸಗೋಡು ಗ್ರಾಮದ ಅಂಗನವಾಡಿಯ ಅಡುಗೆ ಸಹಾಯಕಿಯಾಗಿ ಕಲಾ ಎಂಬವರು ಕರ್ತವ್ಯ ನಿರ್ವಹಿಸುತ್ತಿದ್ದು, ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಮಾತೃಪೂರ್ಣ ಯೋಜನೆಯಡಿ ಗ್ರಾಮದ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ವಿತರಿಸಲು ಪೌಷ್ಟಿಕಾಂಶಯುಕ್ತ ಆಹಾರ ತಯಾರಿಸುವ ಜವಾಬ್ದಾರಿ ಹೊಂದಿದ್ದಾರೆ. ಇವರು ಆ ದಿನದ ಆಹಾರವನ್ನು ಅಂಗನವಾಡಿಯಲ್ಲಿ ಸಿದ್ಧಪಡಿಸುತ್ತಿಲ್ಲ. ಸಭೆ ಸಮಾರಂಭದಲ್ಲಿ ಉಳಿದ ಅನ್ನವನ್ನು ತಂದು ಚಿತ್ರಾನ್ನ ಮಾಡುವದು, ಹಳೆಯ ಸಾಂಬಾರ್ ವಿತರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಇಲಾಖೆಯ ಅಧಿಕಾರಿಗೆ ದೂರು ನೀಡಿದ್ದಾರೆ.

ಕಳೆದ ಭಾನುವಾರ ಮಸಗೋಡು ಗ್ರಾಮದಲ್ಲಿ ಕಲಾ ಅವರ ಸಂಬಂಧಿಕರ ಮನೆಯಲ್ಲಿ ಆಯೋಜಿಸಿದ್ದ ಸಮಾರಂಭಕ್ಕೆ ತೆರಳಿ ಊಟ ಮಾಡಿದ್ದ ಕೆಲ ಫಲಾನುಭವಿಗಳಿಗೆ ಇಂದು ಅದೇ ಸಾಂಬಾರ್‍ನ್ನು ಅಂಗನವಾಡಿ ಮೂಲಕ ವಿತರಿಸಲಾಗಿದೆ. ಎರಡು ದಿನದ ಹಿಂದಿನ ಸಾಂಬಾರ್ ಸೇವಿಸಿದ ಬಾಣಂತಿಗೆ ಇದೀಗ ಹೊಟ್ಟೆನೋವು ಕಾಣಿಸಿಕೊಂಡಿದೆ ಎಂದು ಗ್ರಾಮದ ಪೆರುಮಾಳ್ ಅವರು ಕಚೇರಿಯಲ್ಲಿ ಅಧಿಕಾರಿಯ ಎದುರು ದೂರಿದರು.

‘ತಾನು ಭಾನುವಾರ ಸಮಾರಂಭಕ್ಕೆ ತೆರಳಿ ಇದೇ ಸಾಂಬಾರ್ ನಲ್ಲಿ ಊಟ ಮಾಡಿ ಬಂದಿದ್ದೇನೆ. ಇದೀಗ ಹಳಸಿದ ಸಾಂಬಾರ್‍ನ್ನು ಅಂಗನವಾಡಿ ಮೂಲಕ ವಿತರಿಸಲಾ ಗಿದೆ. ಮಕ್ಕಳು, ಗರ್ಭಿಣಿಯರಿಗೆ ಅನಾರೋಗ್ಯವಾದರೆ ನೀವು ಜವಾಬ್ದಾರಿ ಹೊರುತ್ತೀರಾ?’ ಎಂದು ಪೆರುಮಾಳ್ ಪ್ರಶ್ನಿಸಿದರು.

ಸಮಾರಂಭದಲ್ಲಿ ಅಳಿದುಳಿದ ಆಹಾರವನ್ನು ಮಾತೃಪೂರ್ಣ ಯೋಜನೆಯಡಿ ವಿತರಿಸಲಾಗುತ್ತಿರುವ ಬಗ್ಗೆ ಗ್ರಾಮಸ್ಥರಾದ ಸತೀಶ್, ಪೆರುಮಾಳ್, ಗ್ರಾ.ಪಂ. ಸದಸ್ಯ ಭುವನ್ ಅವರುಗಳು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಸಂದರ್ಭ, ಮಸಗೋಡು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಉಷಾ ಅವರು ಅಡುಗೆ ಸಹಾಯಕಿಯ ಪರವಾಗಿ ವಾದ ಮಾಡಲಾರಂಭಿಸಿದರು. ತಾನು ಎರಡು ದಿನ ಬಸವೇಶ್ವರ ರಸ್ತೆಯ ಅಂಗನವಾಡಿಗೆ ನಿಯೋಜಿತಳಾಗಿದ್ದು, ತಪ್ಪಾಗಿದೆ, ಇಲ್ಲಿಗೆ ಬಿಟ್ಟುಬಿಡಿ, ಊರಿನ ಮರ್ಯಾದೆ ಹೋಗುತ್ತೆ, ಒಂದು ದಿನ ಮಾತ್ರ ಅಲ್ವಾ...? ಎಂದು ಸಮಜಾಯಿ ಷಿಕೆ ನೀಡಲಾರಂಭಿಸಿದರು.

ಈ ಸಂದರ್ಭ ಉಷಾ ಅವರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸಣ್ಣ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಇಂತಹ ಊಟ ಮಾಡಿ ಅಸ್ವಸ್ಥರಾದರೆ ಯಾರು ಹೊಣೆ? ನೀವು ಅಡುಗೆ ಸಹಾಯಕಿಯ ಪರವಾಗಿ ಮಾತನಾಡಬೇಡಿ ಎಂದು ತಾಕೀತು ಮಾಡಿದರು. ಇಂತಹ ಊಟ ನೀಡಿ ಸರ್ಕಾರದ ಹಣವನ್ನು ನುಂಗುತ್ತಿ ದ್ದೀರಾ? ನಿಮಗೆ ಅಂಗನವಾಡಿಯ ವರು ಎಷ್ಟು ಕಮಿಷನ್ ಕೊಡುತ್ತಾರೆ? ಎಂದು ಅಧಿಕಾರಿ ಮಹೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್, ತಾನು ಈಗಷ್ಟೇ ಪ್ರಭಾರ ಅಧಿಕಾರಿಯಾಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದೇನೆ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುವದು. ಅನ್ನ ಮತ್ತು ಸಾಂಬಾರ್‍ನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವದು ಎಂದರು.

ಒಟ್ಟಾರೆ ರಾಜ್ಯ ಸರ್ಕಾರ ಗರ್ಭಿಣಿಯರು, ಬಾಣಂತಿಯರ ಆರೋಗ್ಯದ ಹಿತದೃಷ್ಟಿಯಿಂದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೆ ತಂದು ಕೋಟ್ಯಂತರ ರೂಪಾಯಿ ವ್ಯಯಿಸುತ್ತಿರುವ ಸಂದರ್ಭದಲ್ಲಿ, ತಳಮಟ್ಟದಲ್ಲಿ ಕಾರ್ಯಕ್ರಮವನ್ನು ಪರಿಣಾಮಕಾರಿ ಯಾಗಿ ಅನುಷ್ಠಾನಗೊಳಿಸಬೇಕಾದ ಅಂಗನವಾಡಿ ಕಾರ್ಯಕರ್ತೆ ಮತ್ತು ಅಡುಗೆ ಸಹಾಯಕಿಯರು ಇಂತಹ ಕೃತ್ಯಗಳಿಗೆ ಇಳಿಯುತ್ತಿರುವದು ದುರಂತ. ಈ ಬಗ್ಗೆ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸ ಬೇಕು ಎಂದು ಗ್ರಾ.ಪಂ. ಸದಸ್ಯ ಭುವನ್ ಆಗ್ರಹಿಸಿದರು. ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶೈಲಾ, ಶೀಲಾ ಸೇರಿ ದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.