ಕೂಡಿಗೆ, ನ. 21: ಕೊಡಗಿನ ಪವಿತ್ರ ಕಾವೇರಿ-ಹಾರಂಗಿ ನದಿ ಸಂಗಮ ಕ್ಷೇತ್ರ ಟಾಟಾ ಕಾಫಿ ಕೇಂದ್ರದ ವ್ಯಾಪ್ತಿಯಲ್ಲಿರುವ ಶ್ರೀ ಉದ್ಭವ ಸುಬ್ರಹ್ಮಣ್ಯಸ್ವಾಮಿಯ 49ನೇ ವಾರ್ಷಿಕ ರಥೋತ್ಸವವು ತಾ. 24 ರಂದು ನೆರವೇರಲಿದೆ.
ಶ್ರೀ ಸ್ವಾಮಿಯ ಸನ್ನಿದಾನದಲ್ಲಿ ಅಭಿಷೇಕ, ಮಹಾಪೂಜೆ, ಮಹಾಮಂಗಳಾರತಿ, ದಿಗ್ಭಲಿ, ರಥಬಲಿ, ರಥಪೂಜೆ ನಂತರ 12 ಗಂಟೆಗೆ ಮಹಾರಥೋತ್ಸವ ನೆರವೇರಲಿದೆ. ಅಂದು ಸಂಜೆ 7.30 ಕ್ಕೆ ಮಂಟಪೋತ್ಸವ ನಡೆಯಲಿದೆ.
ರಥೋತ್ಸವದ ಅಂಗವಾಗಿ ತಾ.23ರಂದು ಪುಣ್ಯಾಹ ಪಂಚಗವ್ಯಶುದ್ಧಿ ಅಂಕುರಾರ್ಪಣ, ಧ್ವಜಾರೋಹಣ, ಗಣಹೋಮ ಹಾಗು ಸುಬ್ರಹ್ಮಣ್ಯ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ನಡೆಯಲಿವೆ. ರಾತ್ರಿ 7 ಗಂಟೆಗೆ ಮಹಾಪೂಜೆ, ಅಷ್ಠಾವದಾನ ಸೇವೆ ಮಹಾಮಂಗಳಾರತಿ ನಂತರ ಪಲ್ಲಕ್ಕಿ ಉತ್ಸವ ನಡೆಯಲಿವೆ. ತಾ. 25 ರಂದು ಅವಭೃತೋತ್ಸವ ನಡೆಯಲಿವೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.
ಲಕ್ಷದೀಪೋತ್ಸವ
ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಪೂಜೋತ್ಸವದ ಅಂಗವಾಗಿ ಶ್ರೀ ಸತ್ಯನಾರಾಯಣ ವ್ರತಾಚರಣ ಸಮಿತಿ ವತಿಯಿಂದ ಲಕ್ಷ ದೀಪೋತ್ಸವ ಕಾರ್ಯಕ್ರಮವು ನಡೆಯಿತು.
ಶ್ರೀ ಸ್ವಾಮಿಗೆ ಮಹಾಪೂಜೆಯ ಅಂಗವಾಗಿ ಬೆಳಗ್ಗಿನಿಂದ ವಿಶೇಷ ಪೂಜೆ, ಅಲಂಕಾರ, ಹೋಮ-ಹವನಗಳು ದೇವಾಲಯದ ಪ್ರಧಾನ ಅರ್ಚಕ ನವೀನ್‍ಭಟ್ ಅವರ ನೇತೃತ್ವದಲ್ಲಿ ನಡೆದವು. ಶ್ರೀ ಸತ್ಯನಾರಾಯಣ ವ್ರತಾಚರಣ ಸಮಿತಿ ವತಿಯಿಂದ ಸಂಜೆ ಸಾಂಸ್ಕøತಿಕ ಕಾರ್ಯಕ್ರಮ ನಡೆದವು.
ಸಿದ್ದಾಪುರ: ಸಿದ್ದಾಪುರದ ಗುಹ್ಯ ಗ್ರಾಮದ ಹೈಸ್ಕೂಲ್ ಪೈಸಾರಿಯಲ್ಲಿರುವ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ತಾ. 24 ರಂದು ಸುಬ್ರಹ್ಮಣ್ಯ ಷಷ್ಠಿ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು. ಅಪರಾಹ್ನ 1 ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯದ ಮುಖ್ಯಸ್ಥರು ತಿಳಿಸಿದ್ದಾರೆ.