ಸೋಮವಾರಪೇಟೆ, ನ. 21: ಸ್ವಚ್ಛ ಭಾರತ್ ಅಭಿಯಾನದ ಅಂಗವಾಗಿ ಸ್ಥಳೀಯ ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಜಾಗೃತಿ ಕಾರ್ಯಕ್ರಮದಲ್ಲಿ ಇಲ್ಲಿನ ಓ.ಎಲ್.ವಿ. ಶಾಲಾ ವಿದ್ಯಾರ್ಥಿಗಳು ಸ್ವಚ್ಛ ಪಟ್ಟಣದ ಕಸನು ಬಿತ್ತಿದರು.
ಸ್ಥಳೀಯ ವಿವೇಕಾನಂದ ವೃತ್ತದಿಂದ ಪಟ್ಟಣ ಪ್ರಮುಖ ಮಾರ್ಗಗಳಲ್ಲಿ ಜಾಗೃತಿ ಫಲಕ, ಮಾಹಿತಿ ಪತ್ರಗಳೊಂದಿಗೆ ಸ್ವಚ್ಛ ಪಟ್ಟಣದ ಘೋಷಣೆ ಮೊಳಗಿಸುತ್ತಾ ಸಾಗಿದ ನೂರಾರು ವಿದ್ಯಾರ್ಥಿಗಳು, ಇಲ್ಲಿನ ಜೇಸೀ ವೇದಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಸಾರಾಂಶ ಹೊಂದಿರುವ ನಾಟಕವನ್ನು ಮನೋಜ್ಞವಾಗಿ ಅಭಿನಯಿಸಿದರು.
ಪಟ್ಟಣ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದ್ದು, ಯಾರೂ ಸಹ ಪ್ಲಾಸ್ಟಿಕ್ ಬಳಸಬಾರದು. ಕೊಳಚೆ ನೀರನ್ನು ಕುಡಿಯುವ ನೀರಿನ ಮೂಲಗಳಿಗೆ ಹರಿಸಬಾರದು. ಕಸವನ್ನು ಎಲ್ಲೆಂದರಲ್ಲಿ ಬಿಸಾಕಬಾರದು. ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ, ಸ್ವಚ್ಛ ನೀರು, ಭೂಮಿಯನ್ನು ಉಳಿಸಬೇಕು ಎಂಬ ಸಂದೇಶ ಹೊಂದಿದ್ದ ನಾಟಕವನ್ನು ಶಾಲಾ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಷ್ಮಾ, ಸದಸ್ಯರಾದ ಸುಶೀಲ, ಲೀಲಾ ನಿರ್ವಾಣಿ, ಮುಖ್ಯಾಧಿಕಾರಿ ನಾಚಪ್ಪ ಸೇರಿದಂತೆ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.