ಸಿದ್ದಾಪುರ, ನ. 22: ಜೆ.ಡಿ.ಎಸ್. ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವದು ಖಚಿತ ಹಾಗೂ ಬಿ.ಎ. ಜೀವಿಜಯ ಸಚಿವರಾಗುತ್ತರೆಂದು ಜೆ.ಡಿ.ಎಸ್. ಪಕ್ಷದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಮೂರ್ನಾಡುವಿನ ವಿ.ಎಸ್. ಎಸ್.ಎನ್. ಸಭಾಂಗಣದಲ್ಲಿ ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆ.ಡಿ.ಎಸ್. ಕಾರ್ಯ ಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವು ಅಧಿಕಾರಕ್ಕೆ ಬರುವ ಸಾಧ್ಯತೆ ಇದ್ದು, ಜೆ.ಡಿ.ಎಸ್. ಪಕ್ಷವು ಅಧಿಕಾರಕ್ಕೆ ಬರುವದು ಖಚಿತ. ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ. ಜಿಲ್ಲೆಯ ಮಡಿಕೇರಿ ಕ್ಷೇತ್ರದಲ್ಲಿ ಜೀವಿಜಯ ಅತ್ಯಧಿಕ ಮತಗಳಿಂದ ವಿಜೇತರಾಗಿ ಸಚಿವರಾಗುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಜೆ.ಡಿ.ಎಸ್. ಪರ ಮತದಾರರ ಒಲವು ಇದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಾರಂಭಿಸಿರುವ ಕುಮಾರಪರ್ವ ಯಾತ್ರೆಗೆ ರಾಜ್ಯದಲ್ಲಿ ಅಭೂತಪೂರ್ವ ಜನ ಬೆಂಬಲ ದೊರಕುತ್ತಿದೆಂದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿ.ಜೆ.ಪಿ. ಪಕ್ಷಗಳು ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸದೆ ಪಕ್ಷಗಳ ಸ್ವಾರ್ಥ ಲಾಭಕ್ಕಾಗಿ ರಾಜಕೀಯದಲ್ಲಿ ಕಾಲಹರಣ ಮಾಡುತ್ತಿದ್ದಾರೆಂದು ಆರೋಪಿಸಿದರು. ಅಲ್ಲದೇ ಕಾಂಗ್ರೆಸ್‍ನವರು ಮನೆ ಮನೆ ಕಾಂಗ್ರೆಸ್ ನಡಿಗೆ ಎಂಬ ಕಾಟಾಚಾರದ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಡವರನ್ನು ವಂಚಿಸುತ್ತಿದ್ದಾರೆ. ಇದಲ್ಲದೇ ಬಿ.ಜೆ.ಪಿ. ಪರಿವರ್ತನ ಜಾಥಾ ಮೂಲಕ ಮತದಾರರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ದೂರಿದರು. ಡಿ.ವೈ.ಎಸ್.ಪಿ. ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಅವರ ಕುಟುಂಬಕ್ಕೆ ಪ್ರಾರಂಭದಿಂದಲು ನ್ಯಾಯ ದೊರಕಿಸಲು ಜೆ.ಡಿ.ಎಸ್. ಪಕ್ಷದ ಮುಖಂಡ ಕುಮಾರಸ್ವಾಮಿ ನೇತೃತ್ವದಲ್ಲಿ ಹೊರಾಟ ನಡೆಸಿದ್ದರು ಕೂಡ ಇದೀಗ ಬಿ.ಜೆ.ಪಿ. ಪಕ್ಷದವರು ತಾವು ಶ್ರಮ ವಹಿಸುತ್ತಿರುವಂತೆ ನಾಟಕವನ್ನು ಮಾಡುತ್ತಿದ್ದಾರೆಂದು ಸಂಕೇತ್ ಟೀಕಿಸಿದರು.

ಮಾಜಿ ಸಚಿವ ಹಾಗೂ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎ. ಜೀವಿಜಯ ಮಾತನಾಡಿ, ಕೇಂದ್ರದಲ್ಲಿ ಬಿ.ಜೆ.ಪಿ. ಸರ್ಕಾರವು ಜನಸಾಮಾನ್ಯರು ಬಳಸುವ ದಿನ ಬಳಕೆಯ ವಸ್ತುಗಳ ಬೆಲೆಗಳನ್ನು ಗಗನಕ್ಕೆ ಏರಿಸಿದೆ. ಇದರಿಂದಾಗಿ ಬಡವರ್ಗದ ಮಂದಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು ರೈತರ ಸಂಕಷ್ಟಕ್ಕೆ ಸ್ಪಂದಿಸದ ಹಿನ್ನೆಲೆ ರೈತರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಬದ್ದತೆ ಇಲ್ಲವೆಂದು ದೂರಿದರು. ಈ ಹಿಂದಿನ ಮುಖ್ಯ ಮಂತ್ರಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರೈತರಿಗೆ ಹಾಗೂ ಬಡವರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದು ತಿಳಿಸಿದರು. ಜೆ.ಡಿ.ಎಸ್. ಮುಖಂಡ ಮನೋಜ್ ಬೋಪಯ್ಯ ಮಾತನಾಡಿ, ಜಿಲ್ಲೆಯ ಜೆ.ಡಿ.ಎಸ್. ಪಕ್ಷ ಬಲವರ್ದನೆ ಗೊಳ್ಳುತ್ತಿದ್ದು ಕಾರ್ಯಕರ್ತರು ಒಗ್ಗಟಿನಿಂದ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್.ನ ಅಭ್ಯರ್ಥಿಗಳನ್ನು ವಿಜೇತರಾನ್ನಾಗಿ ಮಾಡಲು ಕಾರ್ಯಕರ್ತರು ಸಂಘಟನೆ ಗೊಳ್ಳಬೇಕೆಂದು ಕರೆ ನೀಡಿದರು.

ಸಭೆಯಲ್ಲಿ ಜೆ.ಡಿ.ಎಸ್. ಮುಖಂಡ ರಾದ ಕೆ.ಎಂ. ಗಣೇಶ್, ಜೆ.ಡಿ.ಎಸ್. ಘಟಕದ ಅಲ್ಪಸಂಖ್ಯಾತರ ಮುಖಂಡ ಇಸಾಕ್, ಜಿ.ಪಂ. ಮಾಜಿ ಸದಸ್ಯ ರಾಜರಾವ್ ಮಾತನಾಡಿದರು. ಸಭೆಯಲ್ಲಿ ಜೆ.ಡಿ.ಎಸ್. ಪಕ್ಷದ ಮುಖಂಡರುಗಳಾದ ಮತೀನ್, ಸುರೇಶ್, ಮನ್ಸೂರ್, ಪಾರೆಮಜಲು ಕುಸುಮ್ ಕಾರ್ಯಪ್ಪ ಹಾಗೂ ಇತರರು ಹಾಜರಿದ್ದರು.

ಮೂರ್ನಾಡಿನ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಅರುಣ್ ಹಾಗೂ ಸಾಧೀಕ್‍ರವರು ಜೆ.ಡಿ.ಎಸ್. ಪಕ್ಷ ಸೇರ್ಪಡೆಗೊಂಡರು.