ವೀರಾಜಪೇಟೆ, ನ. 22: ಎಲ್ಲ ದಾನಕ್ಕಿಂತ ವಿದ್ಯಾದಾನ ಶ್ರೇಷ್ಠ ಎಂಬ ಮಾತನ್ನು ಸಂತ ಅನ್ನಮ್ಮ ವಿದ್ಯಾ ಸಂಸ್ಥೆ ನಿರೂಪಿಸಿದೆ. ಕೊಡಗು ಜಿಲ್ಲೆಯಲ್ಲಿ ಪ್ರಸಿದ್ದ ಹಾಗೂ ಪವಿತ್ರ ದೇವಾಲಯ ಹಾಗೂ ವಿದ್ಯಾ ಸಂಸ್ಥೆ ಇತಿಹಾಸವನ್ನು ಸೃಷ್ಟಿಸುವ ದಾಖಲೆಯತ್ತ ದಾಪುಗಾಲು ಇರಿಸಿದೆ. ಪ್ರಕೃತಿ ಸೌಂದರ್ಯ, ವಿಶಿಷ್ಟ ಸಂಸ್ಕøತಿ ಹಾಗೂ ವೀರತನಕ್ಕೆ ಹೆಸರುವಾಸಿ ಯಾಗಿರುವ ಕೊಡಗು ಜಿಲ್ಲೆಯ ವೀರಾಜಪೇಟೆ ಪಟ್ಟಣದಲ್ಲಿ ಕ್ರೈಸ್ತ ಧರ್ಮದ ಸಂತ ಅನ್ನಮ್ಮ ದೇವಾಲಯಕ್ಕೆ ಎರಡು ಕಾಲು ಶತಮಾನಗಳು (225ವರ್ಷಗಳು) ವಿದ್ಯಾಸಂಸ್ಥೆಗಳಿಗೆ ಒಂದು ಮುಕ್ಕಾಲು ಶತಮಾನಗಳ (175 ವರ್ಷಗಳು)ನ್ನು ಪೊರೈಸಿ ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ಆಡಳಿತ ಯೋಜನೆಗಳನ್ನು ಹಾಕಿಕೊಂಡಿರು ವದು ಮತ್ತಷ್ಟು ಶತಮಾನಗಳನ್ನು ಮುಂದುವರೆಸುವ ಭರವಸೆ ಹೊಂದಿದೆ.
1792ರಲ್ಲಿ ವೀರರಾಜೇಂದ್ರ ರಾಜನ ಕಾಲದಲ್ಲಿಯೇ ನಿರ್ಮಾಣ ಗೊಂಡ ಸಂತ ಅನ್ನಮ್ಮ ದೇವಾಲಯ ಇಂದಿಗೂ ತನ್ನ ಪ್ರತಿಷ್ಠೆಯನ್ನು ಉಳಿಸಿಕೊಂಡು ಮುನ್ನಡೆಯುತ್ತಿದೆ. ದೇವಾಲಯಕ್ಕೆ 50 ವರ್ಷಗಳು ತುಂಬುತ್ತಲೆ ವಿದ್ಯಾ ಸಂಸ್ಥೆಗೂ ಅಡಿಪಾಯ ಹಾಕಲಾಯಿತು. 1848 ರಲ್ಲಿ ಸಂತ ಅನ್ನಮ್ಮ ದೇವಾಲಯವು ಕೊಡಗಿನ ಏಕೈಕ ಕ್ರೈಸ್ತ ದೇವಾಲಯವಾಗಿತ್ತು. ಆಗಿನ ಧರ್ಮಗುರು ಸ್ವಾಮಿ ಗಿಲೋನ್ ಎಂಬವರು ಹಳೆಯ ದೇವಾಲಯ ಇದ್ದ ಸ್ಥಳದಲ್ಲಿಯೇ ಬಿಟೀಷ್ ಸರಕಾರ ಹಾಗೂ ಕ್ರೈಸ್ತ ಧರ್ಮದ ಸಾಹೂಕಾರ್ ಸಾಲ್ವಾದೊರೆ ಪಿಂಟೋ ಅವರುಗಳ ಸಹಕಾರದಿಂದ 1868 ರಲ್ಲಿ ಹಳೇ ದೇವಾಲಯ ಇದ್ದ ಜಾಗದಲ್ಲಿ 150 ಅಡಿ ಎತ್ತರದ ಸುಂದರವಾದ ಗೋಥಿಕ್ ಮಾದರಿಯ ಈಗಿನ ದೇವಾಲಯವನ್ನು ಕಟ್ಟಿಸಿದರು. ಇದರ ಜೊತೆಯಲ್ಲಿ 1891ರಲ್ಲಿ ಕಿವಿಗೆ ಇಂಪು ಹಾಗೂ ಸಂಗೀತಮಯ ನಿನಾದ ಕೊಡುವ ಪ್ಯಾರೀಸ್ ದೇಶದಲ್ಲಿ ತಯಾರಿಸಲಾದ ಎರಡು ಗಂಟೆಗಳನ್ನು ಅಳವಡಿಸಿ ಕೊಡಗಿನಲ್ಲಿಯೇ ವಿಶೇಷ ಕ್ರೈಸ್ತ ದೇವಾಲಯ ಎನಿಸಿಕೊಂಡಿದೆ. ವೀರಾಜಪೇಟೆ ಸುತ್ತಮುತ್ತಲ ಪ್ರದೇಶಕ್ಕೆ ಬರುವ ಪ್ರವಾಸಿಗರು ಚರ್ಚ್ ಗೋಪುರವನ್ನು ಕುತೂಹಲದಿಂದ ವೀಕ್ಷಿಸಿ ತೆರಳುತ್ತಿದ್ದಾರೆ.
ವಿದ್ಯಾಸಂಸ್ಥೆಗಳ ಆರಂಭ
1842ರಲ್ಲಿ ಧಾರ್ಮಿಕ ಕೇಂದ್ರ ವಾಗಿದ್ದ ಸಂತ ಅನ್ನಮ್ಮ ದೇವಾಲಯ ದಲ್ಲಿ ರೋಮನ್ ಕ್ಯಾಥೋಲಿಕ್ ಶಾಲೆಗೆ ಚಾಲನೆ ನೀಡಲಾಯಿತು. ಇದರಿಂದ ಅಸಂಖ್ಯಾತ ವಿದ್ಯಾರ್ಥಿಗಳ ಬಾಳಿಗೆ ವಿದ್ಯೆಯ ಬೆಳಕು ನೀಡಲಾಯಿತು. ಕೊಡಗು ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ನಡೆಸುವದು ಸುಲಭದ ಮಾತಲ್ಲ, ಒಂದು ಮುಕ್ಕಾಲು ಶತಮಾನ ದಿಂದಲೂ ಸಮಾಜಕ್ಕೆ ನಿರಂತರ ವಿದ್ಯಾದಾನ ಮಾಡುತ್ತಾ ನರ್ಸರಿ ಯಿಂದ ಪದವಿಯವರೆಗೆ ಇಂದಿಗೂ ಸುಮಾರು 3000 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಸ್.ಎಸ್.ಎಲ್.ಸಿಯಿಂದ ಪದವಿಯವರೆಗೂ ಈ ವಿದ್ಯಾ ಸಂಸ್ಥೆಗೆ ಪ್ರತಿ ವರ್ಷ ಉತ್ತಮ ಫಲಿತಾಂಶ ಬರುತ್ತಿದೆ. ವಿವಿಧ ಕ್ರೀಡೆಗಳಲ್ಲಿಯು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವ ಹೆಗ್ಗಳಿಕೆಗೆ ವಿದ್ಯಾ ಸಂಸ್ಥೆ ಪಾತ್ರವಾಗಿದೆ. ಸಂತ ಅನ್ನಮ್ಮ ವಿದ್ಯಾ ಸಂಸ್ಥೆ ಕೊಡಗು ಜಿಲ್ಲೆಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಕೊಡಗಿನ ವಿದ್ಯಾ ಕ್ಷೇತ್ರದಲ್ಲಿ ಶೇಕಡವಾರು ಫಲಿತಾಂಶ ಹೆಚ್ಚಿಗೆ ಬರಲು ಈ ವಿದ್ಯಾ ಸಂಸ್ಥೆಯ ಕೊಡುಗೆ ಅಪಾರ.
ವಿದ್ಯಾ ಸಂಸ್ಥೆಗಳ ಆಡಳಿತಾಧಿಕಾರಿ ಅನಿಸಿಕೆ
175 ವರ್ಷ ಗಳಿಂದಲೂ ಕೊಡಗಿನ ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾ ದಾನದ ಮೂಲಕ ಶ್ರೇಷ್ಠತೆಯನ್ನು ಕಾಯ್ದುಕೊಂಡು ತನ್ನ ವಿಶಿಷ್ಠ ಸಾಧನೆಗೆ ಹೆಸರುವಾಸಿಯಾಗಿರುವ ಸಂತ ಅನ್ನಮ್ಮ ವಿದ್ಯಾ ಸಂಸ್ಥೆ ಮುಂದಿನ ದಿನಗಳಲ್ಲಿ ತನ್ನ ವಿಶಿಷ್ಟ ಸೇವೆಯನ್ನು ಇನ್ನಷ್ಟು ವಿಸ್ತರಿಸುವ ಗುರಿ ಹೊಂದಿದೆ. ವಿದ್ಯಾ ಸಂಸ್ಥೆಯ ಬೆಳವಣಿಗೆಗೆ ಸಮುದಾಯದ ಪ್ರಮುಖ ಬಾಂಧವರು, ಉದಾರ ದಾನಿಗಳ ಸಹಕಾರವನ್ನು ದೇವಾಲಯ ಹಾಗೂ ವಿದ್ಯಾ ಸಂಸ್ಥೆ ಈ ಸಂದರ್ಭದಲ್ಲಿ ಸ್ಮರಿಸುತ್ತದೆ. ಸಂತ ಅನ್ನಮ್ಮ ದೇವಾಲಯ ಹಾಗೂ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಹಾಗೂ ಎಂದು ಪ್ರಧಾನ ಧರ್ಮಗುರು ರೆ.ಫಾ. ಮದಲೈ ಮುತ್ತು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ.
-ಡಿ.ಎಂ. ರಾಜ್‍ಕುಮಾರ್