ಗೋಣಿಕೊಪ್ಪ ವರದಿ, ನ. 22: ಇಲ್ಲಿನ ಕಾವೇರಿ ಹಿಲ್ಸ್ ಬಡಾವಣೆಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂಬ ಸ್ಥಳೀಯರ ದೂರಿನಂತೆ ಲೋಕೋಪಯೋಗಿ ಇಲಾಖೆಯ ಎಇಇ ಸುರೇಶ್ ಸ್ಥಳ ಪರಿಶೀಲನೆ ನಡೆಸಿದರು.
ರಸ್ತೆ ಕಳಪೆಯಿಂದ ಕೂಡಿರುವದು ಮೇಲ್ನೋಟಕ್ಕೆ ಕಂಡುಬಂದಿದ್ದು ಗುತ್ತಿಗೆದಾರರ ಬಳಿ ಚರ್ಚಿಸಿ ಒಂದು ವಾರದೊಳಗೆ ಸರಿಪಡಿಸಲಾಗುವದು ಎಂದು ಅಧಿಕಾರಿ ಸುರೇಶ್ ಭರವಸೆ ನೀಡಿದರು.
ಸ್ಥಳೀಯ ಗ್ರಾಮ ಪಂಚಾಯಿತಿ ಮೂಲಕ ನಡೆದ ಸುಮಾರು 175 ಮೀಟರ್‍ನ ರಸ್ತೆ ಕಳಪೆಯಿಂದ ಕೂಡಿದ್ದು, ಎರಡೇ ದಿನದಲ್ಲಿ ಡಾಂಬರು ಕಿತ್ತು ಬಂದಿದೆ. ಹಲವು ವರ್ಷಗಳಿಂದ ಬಡಾವಣೆಗೆ ರಸ್ತೆ ಅವ್ಯವಸ್ಥೆ ನಡುವೆ ತೊಂದರೆ ಅನುಭವಿಸಿದ್ದೇವೆ ಎಂದು ಸ್ಥಳೀಯರು ಆರೋಪಿಸಿದರು.
ಗ್ರಾ.ಪಂ. ಸದಸ್ಯೆ ಪ್ರಭಾವತಿ ಮಾತನಾಡಿ, ಸಂಬಂದsಪಟ್ಟ ಇಂಜಿನಿಯರ್ ಬಳಿ ಮಾಹಿತಿ ಬಯಸಿದಾಗ ಸೂಕ್ತವಾಗಿ ಉತ್ತರಿಸದೆ ಬೇಜವಾಬ್ದಾರಿ ಮಾತುಗಳನ್ನಾಡಿದ್ದಾರೆ. ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು ಶೀಘ್ರವೇ ರಸ್ತೆ ಸರಿಪಡಿಸುವಂತೆ ಆಗ್ರಹಿಸಿದರು.
ಈ ಸಂದರ್ಭ ಗ್ರಾ.ಪಂ. ಸದಸ್ಯ ಪ್ರಮೋದ್ ಗಣಪತಿ, ಜಮ್ಮಡ ಸೋಮಣ್ಣ, ಲೋಕೋಪಯೋಗಿ ಇಂಜಿನಿಯರ್ ಸಣ್ಣುವಂಡ ನವೀನ್, ಬಡಾವಣೆ ಅಧ್ಯಕ್ಷ ಜೀವನ್ ಸೇರಿದಂತೆ ಬಡಾವಣೆ ನಿವಾಸಿಗಳು ಇದ್ದರು.