ಪೊನ್ನಂಪೇಟೆ, ನ. 22: ಸರಕಾರದ ಅನುದಾನದಲ್ಲಿ ನಡೆಯುವ ಯಾವುದೇ ಸಾರ್ವಜನಿಕ ಕಾಮಗಾರಿಗಳಲ್ಲಿ ಕಳಪೆ ಕಂಡುಬಂದಲ್ಲಿ ಕೂಡಲೆ ಸಂಬಂಧಿಸಿದವರಿಗೆ ದೂರು ನೀಡಿ ಸರಕಾರದ ಹಣ ಪೋಲಾಗದಂತೆ ನೋಡಿಕೊಳ್ಳಬೇಕು ಎಂದು ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ಯು ಹೇಳಿದ್ದಾರೆ.
ಇತ್ತೀಚೆಗೆ ಒಟ್ಟು ರೂ. 22 ಲಕ್ಷ ವೆಚ್ಚದಲ್ಲಿ ನಾಲ್ಕೇರಿ ಗ್ರಾಮದ ನಾಲ್ಕು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ, ಬಳಿಕ ನಾಲ್ಕೇರಿ ಗ್ರಾಮದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರಕಾರದ ಹಣ ಪೋಲಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ. ಆದ್ದರಿಂದ ಯಾವದೇ ಕಾಮಗಾರಿಯಲ್ಲಿ ಕಳಪೆ ಕಂಡುಬಂದಲ್ಲಿ ಕೈಕಟ್ಟಿ ಕುಳಿತು ಕೊಳ್ಳುವದು ಉತ್ತಮ ನಾಗರಿಕತೆಯ ಲಕ್ಷಣವಲ್ಲ. ವಿಷಯ ವನ್ನು ಕೂಡಲೇ ಸಂಬಂಧಿಸಿದವರ ಗಮನಕ್ಕೆ ತಂದು ಸಮಸ್ಯೆ ಸರಿಪಡಿಸಲು ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.
ಕೊಡಗಿಗೆ ಮುಖ್ಯಮಂತ್ರಿಗಳ ವಿಶೇಷ ಪರಿಹಾರ ನಿಧಿಯಲ್ಲಿ ಮಂಜೂರಾಗಿರುವ ರೂ. 50 ಕೋಟಿ ಅನುದಾನದ ಪೈಕಿ ಈಗಾಗಲೇ ನಾಲ್ಕೇರಿ ಗ್ರಾ.ಪಂ. ರೂ. 27 ಲಕ್ಷ ಹಾಗೂ ಕೆ. ಬಾಡಗ ಗ್ರಾ.ಪಂ.ಗೆ ರೂ. 37 ಲಕ್ಷ ಅನುದಾನ ಬಿಡುಗಡೆ ಯಾಗಿದೆ. ಮುಖ್ಯಮಂತ್ರಿಗಳ ವಿಶೇಷ ಪರಿಹಾರ ನಿಧಿಯ 2ನೇ ಹಂತದಲ್ಲಿ ರೂ. 49 ಲಕ್ಷ ಬಿಡುಗಡೆಯಾಗಲಿದೆ ಎಂದು ತಿಳಿಸಿದ ಬಿ.ಎನ್. ಪ್ರಥ್ಯು, ಸರಕಾರ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಿದೆ ಎಂದು ಹೇಳಿದರು. ಇದಕ್ಕೂ ಮೊದಲು ರೂ. 7 ಲಕ್ಷ ವೆಚ್ಚದಲ್ಲಿ ನಾಲ್ಕೇರಿ-ಪಲ್ಲೇರಿ ಲಿಂಕ್ ರಸ್ತೆ, ರೂ. 5 ಲಕ್ಷ ವೆಚ್ಚದಲ್ಲಿ ನಾಲ್ಕೇರಿ - ಕಚ್ಚಪನೆ ರಸ್ತೆ, ರೂ. 5 ಲಕ್ಷ ವೆಚ್ಚದಲ್ಲಿ ನಾಲ್ಕೇರಿ-ಶ್ರೀಮಂಗಲ ಮುಖ್ಯ ರಸ್ತೆ ಹಾಗೂ ರೂ. 5 ಲಕ್ಷ ವೆಚ್ಚದಲ್ಲಿ ನಾಲ್ಕೇರಿ-ಚಿಮ್ಮಂಗಡ ಮತ್ತು ಚೆರಿಯಪಂಡ ಕುಟುಂಬಸ್ಥರ ಮನೆಗೆ ಹೋಗುವ ರಸ್ತೆ ಅಭಿವೃದ್ದಿಗೆ ಬಿ.ಎನ್. ಪ್ರಥ್ಯು ಭೂಮಿಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಗ್ರಾಮೀಣ ರಸ್ತೆಗಳು ಬಹಳಷ್ಟು ಪ್ರಮಾಣದಲ್ಲಿ ಸುಧಾರಣೆ ಕಂಡಿದೆ. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಕೊಡಗಿನ ಅದರಲ್ಲೂ ವಿಶೇಷವಾಗಿ ವೀರಾಜಪೇಟೆ ತಾಲೂಕಿನ ಗ್ರಾಮೀಣ ರಸ್ತೆಗಳು ಈ ಸಾಲಿನಲ್ಲಿ ಅಭಿವೃದ್ಧಿ ಕಂಡಿದೆ. ಮುಂದೆಯೂ ತಾಲೂಕಿನ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವದು ಎಂದು ಹೇಳಿದರು. ನಾಲ್ಕೇರಿ ಗ್ರಾ.ಪಂ. ಅಧ್ಯಕ್ಷ ಅಲ್ಲುಮಾಡ ಮುತ್ತಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ದಲ್ಲಿ ತಾ.ಪಂ. ಸದಸ್ಯ ಪಲ್ವೀನ್ ಪೂಣಚ್ಚ, ನಾಲ್ಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಮಾಚಿಮಾಡ ಮನು ಮಾಚಯ್ಯ, ನಾಲ್ಕೇರಿ ಗ್ರಾ.ಪಂ. ಉಪಾಧ್ಯಕ್ಷ ರಾಮು, ಸದಸ್ಯರಾದ ಲಕ್ಷ್ಮಿ, ಮೀನಾ, ಕೆ. ಬಾಡಗ ಗ್ರಾ.ಪಂ. ಉಪಾಧ್ಯಕ್ಷ ಚೆಪ್ಪುಡಿರ ಡಿ. ಬೋಪಣ್ಣ, ನಾಗರಿಕ ಪ್ರಮುಖರಾದ ಮಾಚಿಮಾಡ ಸತೀಶ್, ಸಬಿತಾ, ಅನಿತಾ, ಮಲ್ಲಪನ್ನೀರ ನೀಲು, ತೀತಿರ ಕಟ್ಟಿ, ಅಲ್ಲುಮಾಡ ಕಂದು, ಮುಕ್ಕಾಟಿರ ರಘು, ಚೆಟ್ಟಂಗಡ ರಾಕಿ, ಚಿಮ್ಮಣಮಾಡ ರವಿ, ಚಿಮ್ಮಣಮಾಡ ಶಶಿ, ಚೇಮೀರ ಭೀಮಯ್ಯ ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.
ಮನು ಮಾಚಯ್ಯ ಸ್ವಾಗತಿಸಿ, ಅಲ್ಲುಮಾಡ ಮುತ್ತಪ್ಪ ವಂದಿಸಿದರು.