ಮಡಿಕೇರಿ, ನ. 22: ಹಾಕತ್ತೂರು ತೊಂಭತ್ತು ಮನೆಯ ಮಸೀದಿ ಆವರಣಕ್ಕೆ ಕಾಡುಬೆಕ್ಕುತಲೆ ಬಿಸಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲಾ ಅಪರಾಧ ಪತ್ತೆದಳ ಹಾಗೂ ಮಡಿಕೇರಿ ಗ್ರಾಮಾಂತರ ಪೊಲೀಸರು ಜಂಟಿ ಕಾರ್ಯಾಚರಣೆ ಯಲ್ಲಿ ಪ್ರಕರಣವನ್ನು ಬಯಲಿ ಗೆಳೆದಿದ್ದಾರೆ. ತೊಂಭತ್ತುಮನೆಯ ಹರೀಶ್ ಹಾಗೂ ಬಕ್ಕದ ದಿಲನ್ ಎಂಬವರು ಪಿರಿಯಾಪಟ್ಟಣಕ್ಕೆ ತೆರಳಿ ಹಿಂತಿರುಗುತ್ತಿದ್ದಾಗ ಮುಖ್ಯ ರಸ್ತೆಯಲ್ಲಿ ಯಾವದೋ ವಾಹನ ಡಿಕ್ಕಿಯಾಗಿ ಸತ್ತು ಬಿದ್ದಿದ್ದ ಕಾಡು ಬೆಕ್ಕು ಗೋಚರಿಸಿದೆ. ಇದನ್ನು ಕೊಂಡೊಯ್ದ ಅವರು ಮತ್ತೋರ್ವ ಸ್ನೇಹಿತನ ಮನೆಯಲ್ಲಿ ಅದನ್ನು ಮಾಂಸವಾಗಿ ಪರಿವರ್ತಿಸಿದ್ದಾರೆ. ಬಳಿಕ ಹರೀಶ್ ತಲೆಯನ್ನು ಕೊಂಡೊಯ್ದಿದ್ದು ದಾರಿ ನಡುವೆ ಅದನ್ನು ಮಸೀದಿ ಆವರಣಕ್ಕೆ ಬಿಸಾಡಿದ್ದು, ದಿಲನ್ಗೂ ಮಾಹಿತಿ ನೀಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಇವರಿಬ್ಬರನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.