ಗೋಣಿಕೊಪ್ಪ ವರದಿ, ನ. 22: ಸಾಲಗಾರರಿಂದ ವಸೂಲಾತಿಗೆ ತಡೆಯಾಜ್ಞೆ ನೀಡಿ ರಾಜ್ಯ ಉಚ್ಚನಾಯ್ಯಾಲಯ ನೀಡಿದ ತೀರ್ಪನ್ನು ಪರಾಮರ್ಶಿಸದೆ ಸಂಘದ ಸದಸ್ಯರಿಗೆ ಕಿರುಕುಳ ನೀಡುತ್ತಿರುವ ಜಿಲ್ಲಾ ಗೃಹ ನಿರ್ಮಾಣ ಸಹಕಾರ ಸಂಘದ ವಿರುದ್ದ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಎಚ್ಚರಿಸಿದ್ದಾರೆ.
ಜಿಲ್ಲಾ ಗೃಹ ನಿರ್ಮಾಣ ಸಹಕಾರ ಸಂಘದ ಸುಮಾರು 158 ಸದಸ್ಯರು ಬೆಳೆ ಆಧಾರಿತ ಸಾಲದಲ್ಲಿ 2002 ರಲ್ಲಿ ಇದೇ ಸಂಸ್ಥೆಯಿಂದ ಸಾಲ ಪಡೆದಿದ್ದರು. ಕಾಫಿ ಪ್ಯಾಕೇಜ್ ಮೂಲಕ ನೀಡಿರುವ ಸಾಲವನ್ನು ವಾಣಿಜ್ಯ ಸಾಲ ಎಂದು ಬಿಂಬಿಸಿ ಕಿರುಕುಳ ನೀಡುತ್ತಿರುವದು ಖಂಡನಾರ್ಹ ಈ ಬಗ್ಗೆ ಪ್ರತಿಭಟನೆ ನಡೆಸುವ ಅನಿವಾರ್ಯತೆ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೈತ ಪರವಾಗಿ ಹೋರಾಟ ನಡೆಸುತ್ತಿರುವ ಜಿಲ್ಲಾ ರೈತ ಸಂಘ ತೊಂದರೆಯಲ್ಲಿ ಸಿಲುಕೊಂಡಿರುವ ರೈತರ ಪರವಾಗಿ ಧ್ವನಿ ಎತ್ತಲು ಮುಂದಾಗಿದೆ. ಇದರಂತೆ ಈಗಾಗಲೇ ಜಿಲ್ಲಾಧಿಕಾರಿಯೊಂದಿಗೆ ಚರ್ಚೆ ನಡೆಸಲಾಗಿದೆ. ತಾ. 24 ರಂದು ಗೃಹ ನಿರ್ಮಾಣ ಸಹಕಾರ ಸಂಘದ ಅಧಿಕಾರಿಯೊಂದಿಗೆ ಚರ್ಚೆ ನಡೆಸಲಾಗುವದು. ರೈತರ ವಿರುದ್ಧವಾಗಿ ನಡೆದುಕೊಂಡರೆ ಹೋರಾಟದ ರೂಪುರೇಷೆ ನಡೆಸಲಾಗುವದು ಎಂದು ತಿಳಿಸಿದರು.
ಬಾಳೆಲೆ ರೈತ ವಕ್ತಾರ ಆದೇಂಗಡ ಅಶೋಕ್ ಮಾತನಾಡಿ, ಇಂದು ಸಹಕಾರ ಸಂಘದ ಅಧಿಕಾರಿಗಳು ಸಾಲ ಪಡೆದುಕೊಂಡಿರುವ ಫಲಾನುಭವಿಗಳ ಮನೆ ಎದುರು ಪ್ರತಿಭಟನೆ ಬೆದರಿಕೆ ಹಾಕುವ ಮೂಲಕ ಕಿರುಕುಳ ನೀಡುತ್ತಿ ದ್ದಾರೆ ಎಂದು ಆರೋಪಿಸಿದರು.
2006 ರಲ್ಲಿ ಮಹಾರಾಷ್ಟ್ರ, ಕೇರಳ, ಆಂದ್ರಪ್ರದೇಶ, ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಿದರಿಂದ ಈ 5 ರಾಜ್ಯಗಳ 25 ಜಿಲ್ಲೆಗಳನ್ನು ವಿದರ್ಭ ಪ್ಯಾಕೇಜಿನಡೀ ಸೌಲಭ್ಯ ನೀಡಲು ಮುಂದಾಗಿತ್ತು. ಕೃಷಿಗೆ ಪೂರಕವಾಗುವಂತೆ ಸೌಕರ್ಯಗಳಿಗಾಗಿ ಗೋದಾಮು, ತೋಟದ ಮನೆ, ಕಣ ಇಂತಹ ಕಾಮಗಾರಿಗೆ ಸಾಲ ನೀಡಲಾಗಿತ್ತು. ಇದರ ಅನ್ವಯ 20 ಡಿಸೆಂಬರ್ 2012 ರ ವರೆಗೆ ಪಡೆದ ಎಲ್ಲಾ ಕೃಷಿ ಸಾಲಗಳು ಸುಸ್ತಿಯಾಗಿದ್ದಲ್ಲಿ ಅದಕ್ಕೆ ತಗಲುವ ಪೂರ್ಣ ಬಡ್ಡಿಯನ್ನು ಮನ್ನಾ ಮಾಡುವಂತೆಯೂ ಹಾಗೂ ಅಸಲನ್ನು ಹೊಸ ಸಾಲವಾಗಿ ಪರಿವರ್ತಿಸುವಂತೆಯೂ ಸರ್ಕಾರ ಆದೇಶಿಸಿತ್ತು ಆದರೆ ಜಿಲ್ಲಾ ಗೃಹ ನಿರ್ಮಾಣ ಸಹಕಾರ ಸಂಘ ಇದನ್ನು ತಿರಸ್ಕರಿಸಿದರಿಂದ ರಾಜ್ಯ ಉಚ್ಚನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.
ಈ ಪ್ರಕರಣ ನಡೆಯುವ ಸಂಧರ್ಭ 2010 ರಲ್ಲಿ ಕೇಂದ್ರ ಸರ್ಕಾರದಿಂದ ಕಾಫಿ ಪ್ಯಾಕೇಜ್ನಡಿ ಈ ಯೋಜನೆಯನ್ನು ಸೇರಿಸಲಾಗಿತ್ತು. ಈ ಆದೇಶದಂತೆ ಜೂನ್ 30, 2009 ರವರೆಗೆ ಅಸಲು ಮತ್ತು ಬಡ್ಡಿಯನ್ನು ಸೇರಿಸಿ ಅದರ ಶೇ. 50 ರಷ್ಟು ಕೇಂದ್ರ ಸರ್ಕಾರ ಶೇ. 25 ಸಾಲ ನೀಡಿದ ಸಂಸ್ಥೆ ಭರಿಸುವಂತೆಯೂ, ಇನ್ನುಳಿದ ಶೇ. 25 ಭಾಗವನ್ನು ಸಾಲಗಾರ ಸದಸ್ಯರು ಹೊಸದಾಗಿ ಕಂತುಗಳಲ್ಲಿ ತೀರಿಸುವಂತೆ ನಿಯಮ ನೀಡಿತ್ತು. ಇದು ಬಹಳ ಅನುಕೂಲವಾದರಿಂದ ವಿರ್ದಭ ಪ್ಯಾಕೇಜ್ನಲ್ಲಿ ಸಲ್ಲಿಸಿದ್ದ ಮೇಲ್ಮವಿಯನ್ನು ಹಿಂಪಡೆಯಲಾಗಿತ್ತು. ಆದರೆ ಕಾಫಿ ಬೋರ್ಡ್ನವರು ಕಾಫಿ ಪ್ಯಾಕೇಜ್ ನಮಗೆ ಅನ್ವಯಿಸುದಿಲ್ಲವೆಂದು ತಿರಸ್ಕರಿಸಿದ್ದರಾದರೂ, ಇದರ ಬಗ್ಗೆ ಮೇಲ್ಮವಿ ಸಲ್ಲಿಸಲಾಗಿ ಸದರಿ ಕಾಫಿ ಬೋರ್ಡ್ ತಿರಸ್ಕರಿಸಿದ ಪತ್ರವನ್ನು ಅನೂರ್ಜಿತಗೊಳಿಸಿರುತ್ತಾರೆ ಹಾಗೂ ಹೊಸ ಕ್ಲೈಮ್ ಬಿಲ್ಲ್ ಸಲ್ಲಿಸುವ ಹಾಗೆ ಎರಡನೇ ಪ್ರತಿವಾದಿ ಸಹಕಾರ ಸಂಘಕ್ಕೆ ಆದೇಶದಲ್ಲಿ ತಿಳಿಸಿದೆ.
ಇದರ ವಿರುದ್ಧ ಕಾಫಿ ಬೋರ್ಡ್ ಉಚ್ಚ ನ್ಯಾಯಾಲಯದ ದ್ವಿ ಸದಸ್ಯ ಪೀಠಕ್ಕೆ 2013 ರಲ್ಲಿ ಸಲ್ಲಿಸಿದ ಮೇಲ್ಮವಿಯನ್ನು ಕೂಡ ಕೋರ್ಟ್ ತಿರಸ್ಕರಿಸಿದೆ. ಎರಡು ವರ್ಷ ಕಳೆದ ನಂತರ ಸಂಘವು ಕೋರ್ಟ್ಗೆ ಅರ್ಜಿ ಸಲ್ಲಿಸಿದ ಸದಸ್ಯರಿಗೆ ಸಾಲ ಮರುವಾಪಸಾತಿಗೆ ಕಿರುಕುಳ ನೀಡಲು ಪ್ರಾರಂಭಿಸಿದೆ. ಇದರ ವಿರುದ್ಧ ಉಚ್ಚನ್ಯಾಯಾಲಯ 2015 ರಲ್ಲಿ ವಸೂಲಾತಿಗೆ ತಡೆಯಾಜ್ಞೆ ನೀಡಿರುತ್ತದೆ. ಆದರೆ, ಇದೀಗ ರಾಜ್ಯ ಉಚ್ಚನ್ಯಾಯಾಲಯ ನೀಡಿದ ತೀರ್ಪನ್ನು ಸರಿಯಾಗಿ ಅಥೈಸಿಕೊಳ್ಳದೆ ಗೃಹ ನಿರ್ಮಾಣ ಸಹಕಾರ ಸಂಘದ ಅಧಿಕಾರಿಗಳು ಸಂಘದ ಸದಸ್ಯರಿಗೆ ಕಿರುಕುಳ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಕಾನೂನು ಹೋರಾಟದ ಮೂಲಕ ಎದುರಿಸುತ್ತೇವೆ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ರೈತ ಮುಖಂಡರುಗಳಾದ ಚೋನೀರ ಸತ್ಯಾ, ತೀತರಮಾಡ ಸುನಿಲ್ ಬೋಪಣ್ಣ ಇದ್ದರು.