ಸಿದ್ದಾಪುರ, ನ. 22 : ಮಾಲ್ದಾರೆ ಸಮೀಪ ಹುಲಿ ಪತ್ತೆಯಾದ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಹುಲಿಯನ್ನು ಸೆರೆಹಿಡಿಯಲು ಕಾಫಿ ತೋಟದಲ್ಲಿ ಬೋನ್ ಇರಿಸಲಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಮಾಲ್ದಾರೆ ವ್ಯಾಪ್ತಿಯ ಮೈಲಾದ್‍ಪುರ ವ್ಯಾಪ್ತಿಯಲ್ಲಿ ಜಾನುವಾರಗಳ ಮೇಲೆ ಹುಲಿಯೊಂದು ದಾಳಿ ನಡೆಸಿ ಸಾಯಿಸಿರುವ ಘಟನೆ ಗ್ರಾಮಸ್ಥರಲ್ಲಿ ಹಾಗೂ ಕಾರ್ಮಿಕರಲ್ಲಿ ಆತಂಕ ಸೃಷ್ಟಿಸಿತು.್ತ ಇದಲ್ಲದೇ ಇತ್ತೀಚೆಗೆ ಮಾಲ್ದಾರೆ ಬಳಿ 2 ಜಾನುವಾರಗಳ ಮೇಲೆ ಹುಲಿ ಧಾಳಿ ನಡೆಸಿದ ಪರಿಣಾಮ 2 ಹಸುಗಳು ಮೃತಪಟ್ಟಿದ್ದವು.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ಹುಲಿಯ ಚಲನ ವಲನಗಳನ್ನು ಕಂಡು ಹಿಡಿಯಲು 2 ಸಿ.ಸಿ. ಕ್ಯಾಮಾರಗಳನ್ನು ಕಾಫಿ ತೋಟದಲ್ಲಿ ಅಳವಡಿಸಲಾಗಿತ್ತು. ಅದರೆ ಸಿ.ಸಿ. ಕ್ಯಾಮಾರದಲ್ಲಿ ಹುಲಿಯು ಸೆರೆಯಾಗಲಿಲ್ಲ ಅಲ್ಲದೇ ಹುಲಿಯನ್ನು ಸೆರೆಹಿಡಿಯಲು ಕಾಫಿ ತೋಟದಲ್ಲಿ ಬೋನ್ ಅನ್ನು ಇರಿಸಲಾಗಿದೆ. ಬೋನಿನಲ್ಲಿಯೂ ಕೂಡ ಹುಲಿಯು ನುಸಳದೇ ಅರಣ್ಯ ಇಲಾಖೆಗೆ ಸಮಸ್ಯೆಯಾಗಿತ್ತು. ಆದರೆ ಕಳೆದೆರಡು ದಿನಗಳ ಹಿಂದೆ ಹುಲಿಯು ಮತ್ತೆ ಮೈಲಾತ್‍ಪುರದ ಸಮೀಪದ ಅರಣ್ಯ ಪ್ರದೇಶದ ಅಂಚಿನಲ್ಲಿ ಪ್ರತ್ಯಕ್ಷಗೊಂಡಿದ್ದು ಇದೀಗ ಗ್ರಾಮಸ್ಥರಲ್ಲಿ ಹಾಗೂ ಕಾರ್ಮಿಕರಲ್ಲಿ ಭಯದ ವಾತಾವರಣ ಮೂಡಿದೆ. ಈ ಹಿನ್ನಲೆಯಲ್ಲಿ ಹುಲಿಯು ಪ್ರತ್ಯಕ್ಷಗೊಂಡ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭ ಸುದ್ದಿಗಾರ ರೊಂದಿಗೆ ಮಾತನಾಡಿದ ತಿತಿಮತಿ ವಲಯ ಅರಣ್ಯ ಅಧಿಕಾರಿ ಅಶೋಕ್‍ರವರು ಮಾತನಾಡಿ ಈಗಾಗಲೇ ಜಾನುವಾರಗಳನ್ನು ಸಾಯಿಸಿರುವ ಹುಲಿಯನ್ನು ಸೆರೆಹಿಡಿಯಲು ಕ್ರಮ ಕೈಗೊಂಡಿರುವದಾಗಿ ತಿಳಿಸಿದರು. ಅಲ್ಲದೇ ಮೃತಪಟ್ಟ ಹಸುವಿನ ಮೃತ ದೇಹವನ್ನು ಕಾಫಿ ತೋಟದ ಒಳಗೆ ಇರಿಸಿ ಅದರ ಸಮೀಪ ಬೋನ್ ಇಡಲಾಗಿದೆ ಎಂದು ತಿಳಿಸಿದರು. ಸದ್ಯದಲ್ಲೆ ಹುಲಿಯನ್ನು ಸೆರೆ ಹಿಡಿಯುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

-ವಾಸು