ಸೋಮವಾರಪೇಟೆ, ನ. 23: ಕಾಡಾನೆಗಳ ಕಾಟದಿಂದ ಬೇಸತ್ತಿದ್ದ ಕೂತಿ ಗ್ರಾಮದಲ್ಲಿ ಇದೀಗ ಕಾಟಿಗಳ ಹಾವಳಿ ಮಿತಿ ಮೀರಿದ್ದು, ಕೃಷಿಕ ವರ್ಗಕ್ಕೆ ಕಂಟಕವಾಗಿ ಪರಿಣಮಿಸಿದೆ.ಕಾಫಿ ಮತ್ತು ಭತ್ತದ ಫಸಲು ಬಂದಿ ರುವ ಕಾಲಘಟ್ಟದಲ್ಲೇ ಗ್ರಾಮದಲ್ಲಿ ಕಾಟಿಗಳ ಆಗಮನವೂ ಆಗಿದ್ದು, ಫಸಲು ತುಂಬಿರುವ ಭತ್ತದ ಪೈರನ್ನು ತುಳಿದು ನಾಶಪಡಿಸಿವೆ. ಇದರೊಂದಿಗೆ ಕಾಫಿ ತೋಟ, ಬಾಳೆ ಫಸಲೂ ಸಹ ನಷ್ಟಪಡಿಸಿವೆ. 7 ರಿಂದ 10 ಕಾಟಿಗಳಿರುವ ಹಿಂಡು ಗ್ರಾಮಕ್ಕೆ ಲಗ್ಗೆಯಿಟ್ಟಿದ್ದು, ಗ್ರಾಮದ ಕೃಷಿಕರಾದ ಕೆ.ಆರ್. ಲಿಂಗರಾಜು, ಕೆ.ಪಿ. ಗಿರೀಶ್, ಕೆ.ಆರ್. ಗಣಪತಿ, ಕೆ.ಪಿ. ಪೊನ್ನಪ್ಪ, ಬಿ.ಆರ್. ವಿನೋದ್ ಅವರುಗಳಿಗೆ ಸೇರಿದ ಗದ್ದೆಗೆ ಧಾಳಿ ನಡೆಸಿ, ಭತ್ತದ ಫಸಲನ್ನು ತುಳಿದು ನಷ್ಟಗೊಳಿಸಿವೆ. ಇದರೊಂದಿಗೆ ಬಿ.ಜಿ. ಮೊಗಪ್ಪ ಅವರ ಕಾಫಿ ತೋಟಕ್ಕೂ ನುಗ್ಗಿ ಹಾನಿಗೊಳಿಸಿವೆ.
ಈ ಬಗ್ಗೆ ಸೋಮವಾರಪೇಟೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಗ್ರಾಮಸ್ಥರ ಸಹಕಾರದಿಂದ ಕಾಟಿಗಳನ್ನು ಅರಣ್ಯ ಪ್ರದೇಶಕ್ಕೆ ಅಟ್ಟಿದ್ದಾರೆ. ಸದ್ಯಕ್ಕೆ ಕಾಟಿಗಳು ಅರಣ್ಯಕ್ಕೆ ತೆರಳಿದ್ದರೂ, ಮತ್ತೆ ಕೃಷಿ ಪ್ರದೇಶಕ್ಕೆ ಧಾಳಿಯಿಡುವ ಆತಂಕ ಗ್ರಾಮಸ್ಥರಲ್ಲಿ ಮೂಡಿದೆ.