ಸಿದ್ದಾಪುರ, ನ. 23: ಕೊಂಡಂಗೇರಿ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಮಡಿಕೇರಿ ಡಿವೈಎಸ್ಪಿ ಸುಂದರ್ ರಾಜ್ ತಿಳಿಸಿದ್ದಾರೆ.
ಕೊಂಡಂಗೇರಿ ಗ್ರಾಮದಲ್ಲಿ ಶಿಫಾ ಕೇಂದ್ರದ ಹೆಸರಿನಲ್ಲಿ ಮಹಮ್ಮದ್ ಎಂಬವರು ಅವರ ತಂದೆಯ ಹೆಸರಿನಲ್ಲಿ ಗೋರಿಯೊಂದನ್ನು ನಿರ್ಮಾಣ ಮಾಡಿ ಹೊರ ಊರಿನವರನ್ನು ಇಲ್ಲಿಗೆ ಕರೆಸುತಿದ್ದಾರೆ. ಪವಾಡ ಪುರುಷನೆಂದು ಹೇಳಿಕೊಂಡು ಮಂತ್ರ ತಂತ್ರ ಮಾಡುತ್ತಿದ್ದಾರೆಂದು ಕೊಂಡಗೇರಿಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿ ಉಭಯ ಕಡೆಗಳ ನಡುವೆ ಕಳೆದ ವಾರ ಮಾರಾಮಾರಿ ನಡೆದಿತ್ತು. ಘರ್ಷಣೆ ನಡೆದ ಹಿನ್ನಲೆಯಲ್ಲಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ಘರ್ಷಣೆ ಸಂಬಂಧ ಕೊಂಡಂಗೇರಿಯಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಕೊಂಡಂಗೇರಿಯ ಮುಖ್ಯ ಮಸೀದಿಯ ಸಭಾಂಗಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಭಾಗವಹಿಸಿ ಡಿವೈಎಸ್ಪಿ ಸುಂದರ್ ರಾಜ್ ಮಾತನಾಡಿದರು.
ಗ್ರಾಮದಲ್ಲಿ ಭಿನ್ನಾಭಿಪ್ರಾಯಗಳು ಇರುವ ಹಿನ್ನಲೆಯಲ್ಲಿ ಮುಸ್ಲಿಂ ಸಮುದಾಯ ತತ್ವ ನಿಯಮವನ್ನು ಪಾಲಿಸಿಕೊಂಡು ಮುಂದುವರೆಯ ಬೇಕು. ಗ್ರಾಮದಲ್ಲಿ ಅಶಾಂತಿಗೆ ಅವಕಾಶ ನೀಡಬಾರದೆಂದು ಎಚ್ಚರಿಕೆಯನ್ನು ನೀಡಿದರು. ಅಲ್ಲದೆ ಕಂದಾಚಾರ, ಮೂಢನಂಬಿಕೆಯ ಪವಾಡಗಳ ಮೂಲಕ ಅಮಾಯಕ ರನ್ನು ವಂಚಿಸಬಾರದೆಂದರು.
ಕೊಂಡಂಗೇರಿಯ ಗ್ರಾಮಸ್ಥರು ಮಾತನಾಡಿ ಮುಸ್ಲಿಂ ಪದ್ಧತಿಯಲ್ಲಿ ಸತ್ತವರ ಗೋರಿ ನಿರ್ಮಿಸಿ ಪೂಜೆ ಮಾಡುವದು ಸರಿಯಾದ ಕ್ರಮವಲ್ಲ. ಅದು ಮುಸ್ಲಿಂ ತತ್ವಕ್ಕೆ ವಿರೋಧ ವಾಗಿದ್ದು ಈ ನಿಟ್ಟಿನಲ್ಲಿ ಗೋರಿಯನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರಲ್ಲದೆ ಮನೆಯ ಎದುರು ಗೋರಿ ನಿರ್ಮಿಸಿ ಧ್ವಜವನ್ನು ಕಟ್ಟಿ ಅದರ ಸುತ್ತಲು ಅಮಾಯಕರನ್ನು ಸುತ್ತಾಡಿಸುತ್ತಿದ್ದಾರೆ. ಇದರಿಂದಾಗಿ ಹೊರಗಿನ ಮಂದಿಗೆ ಈ ವ್ಯಕ್ತಿ ಪವಾಡ ಪುರುಷನೆಂದು ಪ್ರಚಾರವಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದೆಂದು ಗ್ರಾಮಸ್ಥರು ತಿಳಿಸಿದರು.
ಕೇರಳ ರಾಜ್ಯದಿಂದ ಕೆಲವರನ್ನು ಬರಮಾಡಿಕೊಂಡು ಪೂಜಿಸುವದನ್ನು ನಿಲ್ಲಿಸಬೇಕೆಂದು ಗ್ರಾಮಸ್ಥರು ಪೊಲೀಸ್ ಇಲಾಖೆ ಬಳಿ ಒತ್ತಾಯಿಸಿದರು. ಸಮಾಜದ ಒಳಿತಿಗಾಗಿ ಮಹಮ್ಮದ್ ಮಾಡುವ ಕೆಲಸಕ್ಕೆ ಅಭ್ಯಂತರವಿಲ್ಲ ಆದರೆ ಪವಾಡದಂತಹ ಕೆಲಸಗಳು ನಡೆದರೆ ಮುಂದೆ ಗ್ರಾಮದಲ್ಲಿ ಸಮಸ್ಯೆಗಳು ಪ್ರಾರಂಭವಾಗುವ ನಿಟ್ಟಿನಲ್ಲಿ ಇಂತಹ ವಿಚಾರಗಳಿಗೆ ಅವಕಾಶ ನೀಡಬಾರದೆಂದು ಗ್ರಾಮಸ್ಥರು ಮನವಿ ಮಾಡಿಕೊಂಡರು.
ಮಹಮ್ಮದ್ ಮಾತನಾಡಿ ತನ್ನನ್ನು ಗ್ರಾಮದಲ್ಲಿ ಬಹಿಷ್ಕಾರ ಮಾಡಿದ್ದಾರೆ ಎಂದು ತಿಳಿಸಿ, ತಾನು ಹಿರಿಯ ಗುರುಗಳ ಪಾಲನೆಯಂತೆ ಮುಂದುವರೆಯುತ್ತೇನೆ, ಯಾವದೇ ಶಾಂತಿ ಭಂಗಕ್ಕೆ ಅವಕಾಶ ನೀಡುವದಿಲ್ಲವೆಂದರು.
ಸಭೆಯಲ್ಲಿ ಮಡಿಕೇರಿ ಸಿ.ಐ. ಮೇದಪ್ಪ, ಸಿದ್ದಾಪುರ ಠಾಣಾಧಿಕಾರಿ ಸುಬ್ರಮಣ್ಯ, ವಕ್ಫ್ ಮಂಡಳಿ ಅಧ್ಯಕ್ಷರು ಹಾಗೂ ಮಸೀದಿ ಸಮಿತಿಯವರು ಹಾಜರಿದ್ದರು.