ನಾಪೆÇೀಕ್ಲು, ನ. 24: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ ಸಮೀಪದ ಚೇಲಾವರ ಗ್ರಾಮದಲ್ಲಿ ಒಂದು ಮರಿಯಾನೆ ಸೇರಿದಂತೆ ಮೂರು ಕಾಡಾನೆಗಳು ಹಗಲು ರಾತ್ರಿ ಎನ್ನದೆ ಭತ್ತದ ಗದ್ದೆ, ಕಾಫಿ ತೋಟ, ಮುಖ್ಯ ರಸ್ತೆಗಳಲ್ಲಿ ಸಂಚರಿಸುತ್ತಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ದಿನ ಬೆಳಿಗ್ಗೆ 8.30 ಗಂಟೆಯ ಸಮಯದಲ್ಲಿ ಕೂಡ ರಸ್ತೆ, ತೋಟಗಳಲ್ಲಿ ಕಾಡಾನೆಗಳು ಓಡಾಡುತ್ತಿರುವದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು, ತೋಟ ಕಾರ್ಮಿಕರು, ಸಾರ್ವಜನಿಕರು ಭಯದಿಂದ ರಸ್ತೆಯಲ್ಲಿ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದ ಜೈನಿರ ಅಶೋಕ್, ತಿಲಕ್, ಬಾಚಮಂಡ ಲೋಕೇಶ್ ಸೇರಿದಂತೆ ಬೋವೇರಿಯಂಡ ಕುಟುಂಬಸ್ಥರ ತೋಟ, ಗದ್ದೆಗಳಲ್ಲಿ ಅಲೆದಾಡುತ್ತಿರುವ ಕಾಡಾನೆಗಳು ಭತ್ತ, ಕಾಫಿ ಫಸಲು, ತೆಂಗು, ಬಾಳೆಗಳನ್ನು ಸಂಪೂರ್ಣವಾಗಿ ನಷ್ಟಗೊಳಿಸಿದೆ. ಭತ್ತದ ಬೇಸಾಯ ಕಷ್ಟ ಎಂಬ ಪರಿಸ್ಥಿತಿಯಲ್ಲೂ ಭತ್ತದ ಬೆಳೆ ಬೆಳೆದ ಬೆಳೆಗಾರರು, ಕಾಡಾನೆ ಹಾವಳಿಯಿಂದ ಸಂಪೂರ್ಣವಾಗಿ ಕಂಗಾಲಾಗಿದ್ದಾರೆ.
ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಸ್ಥಳಕ್ಕೆ ಭೇಟಿ ನೀಡುವ ಸಿಬ್ಬಂದಿಗಳು ಕಾಡಾನೆಗಳನ್ನು ಕಾಡಿಗಟ್ಟಲು ಅಸಹಾಯಕತೆ ಪ್ರದರ್ಶಿಸುತ್ತಿದ್ದಾರೆ. ಕಳೆದ ವರ್ಷದ ಆನೆ ನಷ್ಟ ಪರಿಹಾರ ಫಲಾನುಭವಿಗಳಿಗೆ ಇನ್ನೂ ದೊರೆತಿಲ್ಲ. ಆದುದರಿಂದ ಬೆಳೆ ನಷ್ಟದ ಬಗ್ಗೆ ಮಹಜರು ನಡೆಸಿ ಸ್ಥಳದಲ್ಲಿಯೇ ಪರಿಹಾರ ನೀಡಲು ಕ್ರಮ ಕೈಗೊಳ್ಳದಿದ್ದರೆ, ಮುಂದಿನ ವರ್ಷ ಈ ವ್ಯಾಪ್ತಿಯಲ್ಲಿ ಭತ್ತದ ವ್ಯವಸಾಯ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಆತಂಕವಿದೆ ಎನ್ನುತ್ತಾರೆ ಗ್ರಾಮಸ್ಥರು.
-ಪಿ.ವಿ. ಪ್ರಭಾಕರ್