ಗೋಣಿಕೊಪ್ಪ ವರದಿ, ನ. 23: ಬೆಳ್ಳೂರು ಗ್ರಾಮದ ದಲಿತ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ತಾ. 29 ರಂದು ವೀರಾಜಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಡಿವೈಎಸ್ಪಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಆಯೋಜಿಸಿರುವದಾಗಿ ದಸಂಸ ಜಿಲ್ಲಾಧ್ಯಕ್ಷ ಪರಶುರಾಮ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳ್ಳೂರು ಗ್ರಾಮದ ದಲಿತ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಪೋಲಿಸ್ ಇಲಾಖೆ ಆರೋಪಿಯ ವಿರುದ್ಧ ಯಾವದೇ ಕ್ರಮ ಕೈಗೊಂಡಿಲ್ಲ. ಪ್ರಕರಣವನ್ನು ತಿರುಚುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಪ್ರಕರಣವು ದಿಕ್ಕು ತಪ್ಪುವಂತಿದೆ ಎಂದರು.
ಆರೋಪಿ ಹಾಗೂ ಪೊಲೀಸರ ದೂರವಾಣಿ ಕರೆಗಳನ್ನು ಪರಿಶೀಲಿಸಿದರೆ ಸತ್ಯಾಂಶ ಬಯಲಾಗುತ್ತದೆ. ಅತ್ಯಾಚಾರ ಪ್ರಕರಣದ ಬಗ್ಗೆ ರಾಜ್ಯ ಸಮಿತಿಯ ಜೊತೆ ಚರ್ಚೆ ಮಾಡಲಾಗಿದೆ. ದಲಿತ ಮಹಿಳೆಯರಿಗೆ ನ್ಯಾಯ ಸಿಗುವ ತನಕ ಹೋರಾಟ ಮುಂದುವರೆಸುವದು. ದಸಂಸ ಮಹಿಳಾ ಒಕ್ಕೂಟಕ್ಕೆ ಹಲವಾರು ಪ್ರಗತಿಪರ ಸಂಘಗಳು ಬೆಂಬಲ ನೀಡಿದೆ. ಪ್ರತಿಭಟನಾ ಮೆರವಣಿಗೆ ಗಡಿಯಾರ ಕಂಬದ ಬಳಿಯಿಂದ ಆರಂಭಗೊಂಡು ಡಿವೈಎಸ್ಪಿ ಕಚೇರಿಯಲ್ಲಿ ಕೊನೆಗೊಳ್ಳಲಿದೆ. ಐಜಿ ಸ್ಥಳಕ್ಕೆ ಬಂದು ಮಹಿಳೆಯರ ಅಹವಾಲು ಸ್ವೀಕರಿಸುವವರೆಗೆ ಧರಣಿ ನಿಲ್ಲುವದಿಲ್ಲ ಎಂದು ಹೇಳಿದರು.
ದಸಂಸ ವಿಭಾಗೀಯ ಸಂಚಾಲಕ ಕೃಷ್ಣಪ್ಪ ಮಾತನಾಡಿ, ಆರೋಪಿಯ ಕಡೆಯವರು ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ. ತಮಗೆ ಸಾಕಷ್ಟು ಬಾರಿ ಬೆದರಿಕೆ ಹಾಕಿದ್ದು ಜಿಲ್ಲಾಡಳಿತ ಸೂಕ್ತ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು. ಅತ್ಯಾಚಾರ ಪ್ರಕರಣದ ಆರೋಪಿಯನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದ ಅವರು ಪೋಲಿಸರ ಕಾರ್ಯವೈಖರಿಯನ್ನು ಟೀಕಿಸಿದರು.
ಗೋಷ್ಠಿಯಲ್ಲಿ ತಾಲೂಕು ಸಂಚಾಲಕ ಮುತ್ತ, ಸಾಂಸ್ಕøತಿಕ ಸಂಚಾಲಕ ಹೆಚ್.ಟಿ. ಗಿರೀಶ್, ಸಂಚಾಲಕ ರಜನಿಕಾಂತ್ ಇದ್ದರು.