ಮಡಿಕೇರಿ, ನ.23 : ದೇಶದ ಸುಮಾರು 3 ಸಾವಿರ ಸಾಧು ಸಂತರು ಪಾಲ್ಗೊಳ್ಳುವ ಹಿಂದೂ ಸಮಾಜದ ಧರ್ಮಾಚಾರ್ಯರ ಮತ್ತು ಪೀಠಾಧಿಪತಿಗಳ ಮಹಾಸಭೆ “ಧರ್ಮ ಸಂಸದ್” ತಾ. 24 ರಿಂದ 26ರವರೆಗೆ ಉಡುಪಿಯಲ್ಲಿ ನಡೆಯಲಿದೆ. ಈ ಮಹತ್ವದ ಸಭೆÉಯಲ್ಲಿ ಕೊಡಗಿನ ಹಿಂದೂ ಬಾಂಧವರು ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್‍ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಕಾಲ ಉಡುಪಿಯ ರಾಜಾಂಗಣದಲ್ಲಿ ನಡೆಯುವ ಧರ್ಮ ಸಂಸದ್‍ನಲ್ಲಿ ಕೊಡಗಿನ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಬೋಧ ಸ್ವರೂಪಾನಂದ ಸ್ವಾಮೀಜಿ, ಸಿದ್ದು ಸ್ವಾಮಿ, ಮಲ್ಲೇಶ ಸ್ವಾಮಿ, ಮಹಾಂತ ಸ್ವಾಮಿ, ಸದಾಶಿವ ಸ್ವಾಮಿ, ವಿಶ್ವೇಶ್ವರ ಸ್ವಾಮಿ, ನಾರಾಯಣ ಸ್ವಾಮಿ, ಇಮ್ಮಡಿ ಶಿವಲಿಂಗ ಸ್ವಾಮಿ, ಸಿದ್ಧಗಂಗಾ ಸ್ವಾಮಿ, ಮಹಾಂತೇಶ್ ಸ್ವಾಮಿ, ರುದ್ರ ಸ್ವಾಮಿ ಹಾಗೂ ಆನಂದ ತೀರ್ಥ ಸ್ವಾಮಿಗಳು ಪಾಲ್ಗೊಳ್ಳಲಿದ್ದಾರೆ ಎಂದರು. ಜಾತಿ, ಲಿಂಗ ತಾರತಮ್ಯವಿಲ್ಲದೆ, ಸಮಸ್ತ ಹಿಂದೂ ಬಂಧು ಭಗಿನಿಯರಿಗೆ ಸಮಾನ ಧಾರ್ಮಿಕ ಸ್ವಾತಂತ್ರ್ಯ ನೀಡುವದು, ಗೋ ಸಂವರ್ಧನೆ, ಗೋ ರಕ್ಷÀಣೆಗೆ ಸಮಗ್ರ ಗೋ ಸಂರಕ್ಷಣಾ ಕಾನೂನು ಜಾರಿ, ಮತಾಂತರ ತಡೆಗೆ ಸಂತರ ಸಕ್ರಿಯತೆ, ಸಾಂಸ್ಕøತಿಕ ಆಕ್ರಮಣಕ್ಕೆ ತಡೆ, ಹಿಂದೂ ಸಂಸ್ಕøತಿ, ಸ್ವಾಭಿಮಾನ ಬೆಳೆಸುವ ಅಭಿಯಾನ, ಅಯೋಧ್ಯೆಯಲ್ಲಿ ಶ್ರೀ ರಾಮಜನ್ಮಭೂಮಿ ಮಂದಿರ ನಿರ್ಮಾಣದ ಕುರಿತು ಚಿಂತನೆ ನಡೆಸುವ ವಿಚಾರ ಮಂಥನ ಧರ್ಮ ಸಂಸದ್‍ನಲ್ಲಿ ನಡೆಯಲಿದೆ ಎಂದು ನರಸಿಂಹ ತಿಳಿಸಿದರು.

ರಾಮಮಂದಿರ ನಿರ್ಮಾಣಕ್ಕಾಗಿ ಮುಸ್ಲಿಂ ಬಾಂಧವರು ಕೂಡ ಕೈಜೋಡಿಸುತ್ತಿದ್ದು, ಇದು ಉತ್ತಮ ಬೆಳವಣಿಗೆ ಎಂದರು. ಧÀರ್ಮ ಸಂಸದ್‍ನ ಸಮಾರೋಪದ ದಿನವಾದ ತಾ.26 ರಂದು ಬೆಳಗ್ಗೆ 10 ಗಂಟೆಗೆ ರಾಜಾಂಗಣದಲ್ಲಿ ಹಿಂದೂ ಸಮಾಜದ ಪ್ರಮುಖರ ಸಭೆ ನಡೆಯಲಿದ್ದು, ವಿಶ್ವ ಹಿಂದೂ ಪರಿಷತ್‍ನ ಅಂತರರಾಷ್ಟ್ರೀಯ ಸಂಯುಕ್ತ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ್ ಜೈನ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ನಂತರ ಮಧ್ಯಾಹ್ನ ಸಂತರ ನೇತೃತ್ವದಲ್ಲಿ ಶೋಭಾ ಯಾತ್ರೆ ಜೋಡುಕಟ್ಟೆ ಉಡುಪಿಯಿಂದ ನಡೆಯಲಿದೆ.

ಸಂಜೆ ಎಂಜಿಎಂ ಮೈದಾನದಲ್ಲಿ ನಡೆಯುವ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗಡೆ, ಧರ್ಮ ಸಂಸದ್ ಸಂದೇಶ ನೀಡಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಖ್ಯ ಭಾಷಣ ಮಾಡಲಿದ್ದು, ಶ್ರೀವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಈ ಸಮಾವೇಶದಲ್ಲಿ 3 ಲಕ್ಷಕ್ಕೂ ಅಧಿಕ ಹಿಂದೂ ಬಾಂಧವರು ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್‍ನ ಜಿಲ್ಲಾಧ್ಯಕ್ಷÀ ಟಾಟಾ ಬೋಪಯ್ಯ, ಭಜರಂಗದಳದ ಜಿಲ್ಲಾ ಸಂಚಾಲಕ ಅಜಿತ್ ಕುಮಾರ್, ಸಹ ಸಂಚಾಲಕ ಚೇತನ್, ತಾಲೂಕು ಸಂಚಾಲಕ ಮನು ಹಾಗೂ ಹಿರಿಯ ಸ್ವಯಂ ಸೇವಕ ಕರವಂಡ ಕುಶಾಲಪ್ಪ ಉಪಸ್ಥಿತರಿದ್ದರು.