ಶ್ರೀಮಂಗಲ, ನ. 24: ಪ್ರತ್ಯೇಕ ರಾಜ್ಯವಾಗಿದ್ದ ಕೊಡಗು, ಭಾಷಾವಾರು ರಾಜ್ಯ ರಚನೆ ವೇಳೆ ಕರ್ನಾಟಕ ರಾಜ್ಯದೊಂದಿಗೆ ವಿಲಿನವಾದ ನಂತರ ಕೊಡಗಿನ ಮೂಲ ನಿವಾಸಿಗಳ ನೆಮ್ಮದಿಗೆ ಧಕ್ಕೆಯಾಗಿದೆ. ಕರ್ನಾಟಕ ರಾಜ್ಯದ ಆಡಳಿತದಿಂದ ಕೊಡಗು ಮಲತಾಯಿ ಧೋರಣೆಯನ್ನು ನಿರಂತರವಾಗಿ ಅನುಭವಿಸುವಂತಾಗಿದೆ ಎಂದು ಅಖಿಲ ಕೊಡವ ಸಮಾಜದ ಕಾರ್ಯಾಧ್ಯಕ್ಷ ಪ್ರೊ. ಇಟ್ಟೀರ ಬಿದ್ದಪ್ಪ ವಿಷಾದ ವ್ಯಕ್ತಪಡಿಸಿದರು.
ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ ಪೊನ್ನಂಪೇಟೆಯ ಗಾಂಧಿ ಪ್ರತಿಮೆ ಎದುರು ಕಳೆದ 23 ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕರ್ನಾಟಕ ರಾಜ್ಯವನ್ನು ವಿವಿಧ ರಾಜಕೀಯ ಪಕ್ಷಗಳು ಆಡಳಿತ ನಡೆಸಿದ್ದು ಎಲ್ಲಾ ಸಂದರ್ಭದಲ್ಲೂ ಕೊಡಗಿನ ಹಿತಾಸಕ್ತಿ ಭಾವನೆಗೆ ಸ್ಪಂಧಿಸದೆ ಮಲತಾಯಿ ಧೋರಣೆ ತಾಳಿದೆ. ಪೊನ್ನಂಪೇಟೆ ತಾಲೂಕು ರಚನೆಗೆ ಎಲ್ಲಾ ಮಾನದಂಡಗಳ ಪ್ರಕಾರ ಅರ್ಹತೆ ಇದ್ದರೂ ಈ ತಾಲೂಕು ರಚನೆಗೆ ಸರ್ಕಾರಗಳು ಮುಂದಾಗಲಿಲ್ಲ. 2001ರಿಂದಲೇ ಪೊನ್ನಂಪೇಟೆ ತಾಲೂಕು ರಚನೆಗೆ ಹೋರಾಟ ನಡೆಸುತ್ತಿದ್ದರೂ ತಾಲೂಕು ರಚನೆಗೆ ಮುಂದಾಗದಿರುವದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಪ್ರತಿಭಟನೆಯಲ್ಲಿ ಗೋಣಿಕೊಪ್ಪ ರೋಟರಿ ಸಂಸ್ಥೆಯ ಅಧ್ಯಕ್ಷ ಮಚ್ಚಮಾಡ ವಿಜಯ, ಕಾರ್ಯದರ್ಶಿ ದಿಲನ್ ಚಂಗಪ್ಪ, ಸದಸ್ಯರಾದ ಪಿ.ಬಿ.ಪೂಣಚ್ಚ, ಸಿ.ಎಸ್.ವಾಸು ಉತ್ತಪ್ಪ, ಟಿ.ಬಿ.ಪೂಣಚ್ಚ, ಪದ್ಮನಾಭ ಕಾಮತ್, ಸಜನ್ ಚಂಗಪ್ಪ, ಸುಷ್ಮ ಚಂಗಪ್ಪ, ಅಖಿಲ ಕೊಡವ ಸಮಾಜದ ಸಮಿತಿ ಸದಸ್ಯರಾದ ಅಜ್ಜಿಕುಟ್ಟೀರ ಸುಬ್ರಹ್ಮಣಿ, ಅಮ್ಮಣಿಚಂಡ ರಾಜ ನಂಜಪ್ಪ, ಪೊನ್ನಂಪೇಟೆ ಹಿರಿಯ ನಾಗರಿಕ ವೇದಿಕೆಯ ಪದಾಧಿಕಾರಿಗಳು ಭಾಗವಹಿಸಿದ್ದರು.