ಮಡಿಕೇರಿ, ನ. 23: ಜಿಲ್ಲೆಯಲ್ಲಿ ಡಿಸೆಂಬರ್ 4 ರಿಂದ 14 ರವರೆಗೆ ‘ಅರಿವು’ ಕನ್ನಡ ಚಲನಚಿತ್ರ ಮಕ್ಕ್ಕಳ ಚಲನ ಚಿತ್ರೋತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಕ್ಕಳ ಚಲನ ಚಿತ್ರೋತ್ಸವ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಡಿಸೆಂಬರ್ 4 ರಿಂದ 14 ರವರೆಗೆ ಜಿಲ್ಲೆಯ ಮಡಿಕೇರಿ, ಕುಶಾಲನಗರ, ಶನಿವಾರಸಂತೆ, ಸಿದ್ದಾಪುರ ಚಿತ್ರಮಂದಿರಗಳಲ್ಲಿ ಮಕ್ಕಳ ಚಲನಚಿತ್ರೋತ್ಸವ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಂಡು ಮಕ್ಕಳ ಚಲನಚಿತ್ರೋತ್ಸವವನ್ನು ಯಶಸ್ವಿಗೊಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.

ನಿಗದಿಪಡಿಸಿದ ದಿನಾಂಕದಂದು ಮಕ್ಕಳನ್ನು ಚಿತ್ರಮಂದಿರಗಳಿಗೆ ಕರೆತರಲು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸಮನ್ವಯ ಮಾಡಿಕೊಂಡು ಯಾವದೇ ಕುಂದು ಬಾರದಂತೆ ಮಕ್ಕಳ ಚಲನ ಚಿತ್ರೋತ್ಸವ ನಡೆಸಬೇಕು ಎಂದು ಅವರು ತಿಳಿಸಿದರು.

ಚಲನಚಿತ್ರ ಮಂದಿರಗಳ ಮಾಲೀಕರಿಗೆ ಆಸನಗಳ ಮಿತಿಗನುಗುಣವಾಗಿ ಮಕ್ಕಳಿಗೆ ಅವಕಾಶ ಮಾಡಿಕೊಡಬೇಕು ಎಂದು ಅವರು ತಿಳಿಸಿದರು. ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕಿ ಬಿ.ಬಿ. ಸಾವಿತ್ರಿ, ಮಡಿಕೇರಿ ಕಾವೇರಿ ಮಹಲ್ ಚಿತ್ರಮಂದಿರದ ವ್ಯವಸ್ಥಾಪಕ ಪಾಲಾಕ್ಷಪ್ಪ, ಕುಶಾಲನಗರದ ಕೂರ್ಗ್ ಸಿನಿಫ್ಲೆಕ್ಸ್ ವ್ಯವಸ್ಥಾಪಕ ಉಮೇಶ್, ಶನಿವಾರಸಂತೆಯ ಯಶಸ್ವಿನಿ ಚಿತ್ರ ಮಂದಿರದ ವ್ಯವಸ್ಥಾಪಕ ಸುರೇಶ್, ಸಿದ್ದಾಪುರ ವುಡ್ ಲ್ಯಾಂಡ್ ವ್ಯವಸ್ಥಾಪಕ ಉಮೇಶ್ ಉಪಸ್ಥಿತರಿದ್ದರು.