ಚೆಟ್ಟಳ್ಳಿ, ನ. 24: ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಪರಿಶಿಷ್ಟ ಪಂಗಡಕ್ಕೆ ಸೇರಿದ ದಿವಂಗತ ಮಾಜಿ ಅಧÀ್ಯಕ್ಷ ಕರಿಯ ಅವರ ಪತ್ನಿ ಯಮುನಾ ಅನಾಥವಾದ ಅತಂತ್ರ ಬದುಕಿನ ಕತೆಯಿದು..!!!
ಪತಿ ಪಿ.ಕೆ. ಕರಿಯ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರೆ, ಆಶ್ರಯ ನೀಡುತ್ತಿದ್ದ ಗಂಡು ಮಕ್ಕಳು ಕೂಡ ಮರಣ ಹೊಂದಿದರು. ರಕ್ತ ಸಂಬಂಧಿಕರಿದ್ದರೇನು? ಎಲ್ಲರೂ ಆಶ್ರಯ ನೀಡುವರೇ? ಗಂಜಿ ಕೂಳಿಗಾಗಿ ಕಾರ್ಮಿಕರನ್ನು ಕೆಲಸಕ್ಕೆ ಕರೆದೊಯ್ಯುತ್ತಿದ್ದರಿಂದ ಜನ ಈಕೆಯ ಪತಿಯನ್ನು ಕರಿಯ ಮೇಸ್ತ್ರಿ ಎಂದು ಕರೆಯುತ್ತಿದ್ದರೆ, ಬಾಲ್ಯದಿಂದಲೇ ದುಡಿದು ಬದುಕಿದ ಯಮುನಾ ಮುಪ್ಪಿನಲ್ಲಿ ಅನಾಥವಾದಳು. ಕಳೆದೆರಡು ತಿಂಗಳಿಂದ ಚೆಟ್ಟಳ್ಳಿಯ ಸಂತೆಮಾರುಕಟ್ಟೆಯೇ ಆಶ್ರಯತಾಣವಾದರೆ ಊರುಗೋಲೊಂದೆ ಜೊತೆಯಾಯಿತು. ಹೊಟ್ಟೆ ಹಸಿವಿಗಾಗಿ ಕೈಚೀಲ ಊರುಗೋಲಿಡಿದು ಹಲವು ಮನೆಮನೆಗಳ ಬಾಗಿಲು ಬಡಿದು ಬೇಡುವ ಪರಿಸ್ಥಿತಿ.
ಯಮುನಾಳ ಶೋಚನೀಯ ಬದುಕನ್ನು ನೋಡಿ ತಲೆಕೆಡಿಸಿಕೊಂಡ ಪಂಚಾಯಿತಿ ಸಿಬ್ಬಂದಿ ಪ್ರಶಾಂತ್ ಮಡಿಕೇರಿಯ ಶ್ರೀ ಶಕ್ತಿ ವ್ರದ್ದಾಶ್ರಮವನ್ನು ಸಂಪರ್ಕಿಸಿ ವಿವರ ನೀಡಿ ಮಾನವೀಯತೆ ಮೆರೆದ ಫಲವಾಗಿ ವೃದ್ದಾಶ್ರಮದ ಸಿಬ್ಬಂದಿಗಳು ಚೆಟ್ಟಳ್ಳಿಗೆ ಬಂದು ವಿಚಾರಿಸಿ ಚೆಟ್ಟಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಅವರ ಜೊತೆ ಚರ್ಚಿಸಿ ಯಮುನಾಳಿಗೆ ವೃದ್ದಾಶ್ರಮದಲ್ಲಿ ಆಶ್ರಯ ನೀಡುವ ಬಗ್ಗೆ ಹೇಳಿದಾಗ ಒಪ್ಪಿದಳು. ಕಾನೂನಿನಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೆಟ್ಟಳ್ಳಿ ಪೋಲಿಸ್ ಠಾಣೆಯಿಂದ ಆನುಮತಿ ಪಡೆದು ಚೆಟ್ಟಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ಸಿಬ್ಬಂದಿಗಳಾದ ಚಂದ್ರ, ಪ್ರಶಾಂತ್, ಕಂದಸ್ವಾಮಿ, ಇಸ್ಮಾಯಿಲ್ ಕಂಡಕರೆ, ವ್ಯಾಪಾರಿಗಳಾದ ಖಲೀಲ್, ನಿಸಾರ್, ಯೂಸಫ್ ಚೆಟ್ಟಳ್ಳಿಯಿಂದ ಯಮುನಾಳನ್ನು ಬೀಳ್ಕೊಟ್ಟು ಮಾನವೀಯತೆ ಮೆರೆದರು. -ಕರುಣ್ ಕಾಳಯ್ಯ