ಸೋಮವಾರಪೇಟೆ, ನ. 23 : ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಿರುವ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಕ್ರಮ ಖಂಡನೀಯ ಎಂದು ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಕೈಗೊಳ್ಳಲಾಗಿರುವ ಅನೇಕ ಕಾಮಗಾರಿಗಳಿಗೆ ಉಸ್ತುವಾರಿ ಸಚಿವರು ಮತ್ತು ವಿಧಾನ ಪರಿಷತ್ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೇ ತಮ್ಮದೇ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ಶಾಸಕರು ಭೂಮಿ ಪೂಜೆ ನೆರವೇರಿಸಿದ್ದಾರೆ. ಇದು ಯಾವ ನ್ಯಾಯ? ಎಂದು ಲೋಕೇಶ್ ಪ್ರಶ್ನಿಸಿದರು.

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಂದರ್ಭ ಅಧಿಕಾರಿಗಳು ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಆ ಸಮಯದಲ್ಲಿ ಕಾರ್ಯಕ್ರಮಕ್ಕೆ ಗೈರಾಗುವ ಶಾಸಕರು ಇದೀಗ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಿರುವದು ಖಂಡನೀಯ ಎಂದರು.

ರಾಜ್ಯ ಸರ್ಕಾರದಿಂದ ಕೊಡಗಿಗೆ ಅನುದಾನವೇ ಬರುತ್ತಿಲ್ಲ ಎಂದು ಶಾಸಕರು ಹಾಗೂ ಬಿಜೆಪಿ ಮುಖಂಡರು ಆರೋಪಿಸುತ್ತಿರುವ ಮಧ್ಯೆಯೇ ಕೋಟ್ಯಂತರ ರೂಪಾಯಿ ಅನುದಾನ ಕಾಮಗಾರಿಗಳಿಗೆ ರಂಜನ್ ಚಾಲನೆ ನೀಡುತ್ತಿದ್ದಾರೆ. ಇದು ರಾಜ್ಯ ಸರ್ಕಾರದ ಹಣವಲ್ಲವೇ? ಒಂದು ವೇಳೆ ರಾಜ್ಯ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದಾದರೆ ಭೂಮಿ ಪೂಜೆ ನೆರವೇರುತ್ತಿರುವ ಕಾಮಗಾರಿಗಳಿಗೆ ಅನುದಾನ ಎಲ್ಲಿಂದ ಬಂತು? ಎಂಬದನ್ನು ಸ್ಪಷ್ಟಪಡಿಸಲಿ ಎಂದು ಲೋಕೇಶ್ ಸವಾಲು ಹಾಕಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಕೊಡಗಿನ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‍ನಲ್ಲೂ ಕೋಟ್ಯಂತರ ರೂಪಾಯಿ ಅನುದಾನ ನೀಡಿದೆ. ಇದನ್ನು ಮರೆಮಾಚಿ ವೃಥಾ ಆರೋಪ ಮಾಡುವ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯಲಾಗುತ್ತಿದೆ ಎಂದು ಲೋಕೇಶ್ ಆರೋಪಿಸಿದರು.

ಮನೆ ಮನೆಗೆ ಕಾಂಗ್ರೆಸ್ ಅಭಿಯಾನದಲ್ಲಿ ರಾಜ್ಯ ಸರ್ಕಾರದ ಜನಪರ ಯೋಜನೆಗಳು, ಕೊಡಗಿಗೆ ಬಿಡುಗಡೆಯಾದ ಅನುದಾನಗಳ ಬಗ್ಗೆ ಪ್ರತಿಯೋರ್ವರಿಗೂ ಮಾಹಿತಿ ನೀಡುತ್ತಿದ್ದೇವೆ. ಜನರು ಕ್ಷುಲ್ಲಕ ಆರೋಪಗಳನ್ನು ನಂಬುವದಿಲ್ಲ ಎಂಬದನ್ನು ಶಾಸಕರು ಮನವರಿಕೆ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.