ಮಡಿಕೇರಿ, ನ. 24: ಇಂದು ಬೆಳಿಗ್ಗೆ ಮಡಿಕೇರಿಯ ಪ್ರಮುಖ ಬೀದಿಗಳಲ್ಲಿ ಕೇಳಿ ಬಂದ ಕೂಗು ಇದು. ‘‘ಹಾಲು ಬೇಕೆ ಹಾಲು ಕತ್ತೆ ಹಾಲು’’ ಕಫ, ಕೆಮ್ಮು, ವಾತ, ಪಿತ್ತ, ಉಬ್ಬಸ, ನೆಗಡಿ, ಶೀತ, ಜ್ವರ, ತಲೆನೋವು, ಮಲಬದ್ಧತೆ ಇತ್ಯಾದಿಗಳಿಗೆ ಶಮನಕಾರಿ ಈ ಕತ್ತೆ ಹಾಲು. ಮೂರು ಡೋಸ್ ಸೇವಿಸಿದರೆ ಸಾಕು ಎಲ್ಲಾ ರೋಗಗಳು ಮಾಯವಾಗಲಿದೆ.
ಬೆಳ್ಳಂಬೆಳಗ್ಗೆ ಮಡಿಕೇರಿಯ ಬೇರೆ ಬೇರೆ ಬೀದಿಗಳಲ್ಲಿ ದೂರದ ತಮಿಳುನಾಡಿನ ಸೇಲಂನಿಂದ ಬಂದಿರುವದಾಗಿ ಹೇಳಿಕೊಳ್ಳುತ್ತಿದ್ದ ಈ ಕುಟುಂಬಗಳು ಬಿರುಸಿನ ಕತ್ತೆ ಹಾಲು ಮಾರಾಟದಲ್ಲಿ ತೊಡಗಿದ್ದುದು ಕಂಡುಬಂತು. ಸ್ಥಳದಲ್ಲೇ ಕತ್ತೆಯ ಕೆಚ್ಚಲಿನಿಂದ ಹಿಂಡಿ ಕೊಡುತ್ತಿದ್ದ ಹಾಲನ್ನು ಸಣ್ಣ ಮಕ್ಕಳಿಗೆ ಒಂದು ಡೋಸ್ ಕುಡಿಸಿ ರೂ. 50 ಪಡೆಯುತ್ತಿದ್ದರು. ದೊಡ್ಡವರಿಗೆ ಈ ಕತ್ತೆ ಹಾಲನ್ನು ಎರಡು ಡೋಸ್ ಕುಡಿಯಲು ಕೊಟ್ಟು ರೂ. 100 ಸಂಗ್ರಹಿಸಲಾಗುತ್ತಿತ್ತು. ಕತ್ತೆಯೊಂದಿಗೆ ಬೇರೆ ಬೇರೆ ತಂಡಗಳಲ್ಲಿ ಮನೆ ಬಾಗಿಲಿಗೆ ಬರುತ್ತಿದ್ದ ಈ ಮಂದಿ ವಿಶ್ವಾಸದಿಂದ ಹೇಳುತ್ತಿದ್ದ ಮಾತು, ಕತ್ತೆ ಹಾಲು ಸೇವಿಸಿದರೆ ಮೇಲಿನ ಎಲ್ಲಾ ದೋಷಗಳು ದೂರವಾಗಲಿವೆ ಎಂದು. ಬಾಲಕನೊಬ್ಬನಿಗೆ ಈ ಹಾಲು ನೀಡುತ್ತಿದ್ದ ಅಪರೂಪದ ದೃಶ್ಯವೊಂದು ‘ಶಕ್ತಿ’ಗೆ ಸೆರೆಸಿಕ್ಕಿದ್ದನ್ನು ಚಿತ್ರದಲ್ಲಿ ಕಾಣಬಹುದು.