ಮಡಿಕೇರಿ, ನ. 24: ದೇಶ ಇಂದು ಯಾತನಮಯ ಸ್ಥಿತಿಗೆ ತಲುಪಿದೆ ಎಂಬ ಭಯ ನಮ್ಮನ್ನು ಕಾಡುತ್ತಿದ್ದು, ಇತಿಹಾಸದಲ್ಲಿನ ಚಳುವಳಿಗಳನ್ನು ಗಮನಿಸಿದಾಗ ಪ್ರತಿ ಚಳುವಳಿ ಕೂಡ ಕೆಲವು ಬೇಡಿಕೆಗಳನ್ನು ಒಳಗೊಂಡಿತ್ತು. ಆದರೆ ಅವುಗಳು ಸೀಮಿತ ಬೇಡಿಕೆಗಳನ್ನು ಒಳಗೊಂಡಿದ್ದವು. ಪ್ರಗತಿಪರರು ಹಾಗೂ ಮಾನವತಾವಾದಿಗಳು ಒಗ್ಗೂಡಿ ವೇದಿಕೆಯನ್ನು ಮಾನವ ಬಂಧುತ್ವ ವೇದಿಕೆ ರಚಿಸಿ, ಸಮಾಜದ ಪ್ರಗತಿಗಾಗಿ ದುಡಿಯುವದಾಗಿ ಪ್ರತಿಪರ ಚಿಂತಕ ಹಾಗೂ ವೇದಿಕೆಯ ರಾಜ್ಯ ಸಂಚಾಲಕ ಸತೀಶ್ ಹಾಸನ ಹೇಳಿದರು.
ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಮಾನವ ಬಂಧುತ್ವ ವೇದಿಕೆಯ ಕೊಡಗು ಘಟಕದ ಅನಾವರಣ ಕಾರ್ಯಕ್ರಮ ಹಾಗೂ ಮೌಢ್ಯ ವಿರೋಧಿ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕವನ್ನು ಮೌಢ್ಯಮುಕ್ತ ರಾಜ್ಯವನ್ನಾಗಿಸುವ ವೇದಿಕೆಯ ಗಂಭೀರ ಪ್ರಯತ್ನವಾಗಿದ್ದು, ಆ ನಿಟ್ಟಿನಲ್ಲಿ ರಾಜ್ಯದ ಆಧುನಿಕ ವಿಚಾರ ಕ್ರಾಂತಿಯ ಹರಿಕಾರರೆನಿಸಿದ ಸತೀಶ್ ಜಾರಕಿಹೊಳಿ ಮಾನವ ಬಂಧುತ್ವ ವೇದಿಕೆ ಮತ್ತು ಈ ಬೃಹತ್ ಮೌಢ್ಯ ವಿರೋಧಿ ಸಮಾವೇಶದ ಪ್ರೇರಣ ಶಕ್ತಿಯಾಗಿದ್ದಾರೆ.
ವೇದಿಕೆ ವತಿಯಿಂದ ಇತಿಹಾಸವನ್ನು ನಮ್ಮ ಯುವಜನತೆಗೆ ನಿಷ್ಕಳಂಕವಾಗಿ ತಿಳಿಸುವ ಉದ್ದೇಶವನ್ನು ಹೊಂದಿದ್ದು, ವಿವಿಧ ಕಡೆ ಇದಕ್ಕಾಗಿ ಹಲವು ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗುವದು ಎಂದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆಯ ಕೊಡಗು ಜಿಲ್ಲಾ ಸಂಚಾಲಕ ನೆರವಂಡ ಉಮೇಶ್ ವಹಿಸಿದ್ದರು. ವೇದಿಕೆಯಲ್ಲಿ ವಕೀಲರಾದ ವಿದ್ಯಾಧರ್, ಕುಂಞಬ್ದುಲ್ಲ, ರಮಾನಾಥ್ ಹಾಗೂ ಇನ್ನಿತರರು ಇದ್ದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಮೌಢ್ಯ ವಿರೋಧಿ ಸಮಾವೇಶದ ಅಂಗವಾಗಿ ರಾಜ್ಯ ವಿವಿಧ ಜಿಲ್ಲೆಗಳಿಂದ ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್, ಶ್ರೀ ನಾರಾಯಣ ಗುರು ನಾಮಾಂಕಿತದ ಐದು ಕಲಾ ಜಾಥಾ ತಂಡಗಳು ಪ್ರÀಯಾಣ ಆರಂಭಿಸಿದ್ದು, ರಾಜ್ಯಾದ್ಯಂತ ಸಂಚರಿಸುವ ಜಾಥಾ ಸಂಜೆ ಮಡಿಕೇರಿಗೆ ಆಗಮಿಸಿತು. ಮೈಸೂರಿನಿಂದ ಆಗಮಿಸಿದ ಜಾಥಾದ ತಂಡವನ್ನು ಸುದರ್ಶನ ವೃತ್ತದಲ್ಲಿ ವೇದಿಕೆ ಜಿಲ್ಲಾ ಸಮಿತಿ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು. ಬಳಿಕ ಕಾವೇರಿ ಕಲಾಕ್ಷೇತ್ರದವರೆಗೆ ಮೆರವಣಿಗೆ ನಡೆಸಲಾಯಿತು.