ಸೋಮವಾರಪೇಟೆ,ನ. 23: ಸಮೀಪದ ಚೌಡ್ಲು ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಅಯ್ಯಪ್ಪ ಕಾಲೋನಿಯ ಹೆಸರನ್ನು ಅಂಬೇಡ್ಕರ್ ನಗರ ಎಂದು ಮರು ನಾಮಕರಣ ಮಾಡುವ ಕಾರ್ಯಕ್ಕೆ ಗ್ರಾಮಸ್ಥರಿಂದ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತಗೊಂಡಿವೆ.

ಕಳೆದ 30 ರಿಂದ 40 ವರ್ಷಗಳಿಂದ ಚಾಲ್ತಿಯಲ್ಲಿರುವ ಅಯ್ಯಪ್ಪ ಕಾಲೋನಿಯ ಹೆಸರನ್ನು ಇದೀಗ ಅಂಬೇಡ್ಕರ್ ನಗರ ಎಂದು ಬದಲಾಯಿಸಲು ಗ್ರಾಮದ ಕೆಲವರು ಪಂಚಾಯಿತಿಗೆ ಮನವಿ ಸಲ್ಲಿಸಿದ ಮೇರೆ ಚೌಡ್ಲು ಗ್ರಾ.ಪಂ. ಆಡಳಿತ ಮಂಡಳಿ ಹೆಸರು ಬದಲಾವಣೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿ ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಕಡತ ಕಳುಹಿಸಲು ತೀರ್ಮಾನಿಸಿದೆ.

ಈ ಮಧ್ಯೆ ಸ್ಥಳೀಯ ಕೆಲವರು ಅಯ್ಯಪ್ಪ ಕಾಲೋನಿ ಎಂಬದರ ಬದಲಾಗಿ ಅಂಬೇಡ್ಕರ್ ನಗರ ಎಂದು ನಾಮಕರಣ ಮಾಡಿ ನೂತನ ಫಲಕ ಅಳವಡಿಸಿದ್ದರು. ಇದರ ಉದ್ಘಾಟನೆ ಯನ್ನು ಸಂಜೆ 4 ಗಂಟೆಗೆ ಪ್ರಜಾ ಪರಿವರ್ತನ ವೇದಿಕೆಯ ಜಿಲ್ಲಾಧ್ಯಕ್ಷ ಹೆಚ್.ಎಸ್. ಮುತ್ತಪ್ಪ ಅವರ ನೇತೃತ್ವದಲ್ಲಿ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷರಿಂದ ನೆರವೇರಿಸಲು ಸಿದ್ಧತೆ ಕೈಗೊಳ್ಳಲಾಗಿತ್ತು.

ಈ ಬಗ್ಗೆ ಮಾಹಿತಿ ಪಡೆದ ಗ್ರಾಮದ 30ಕ್ಕೂ ಅಧಿಕ ಮಂದಿ ತಾಲೂಕು ಕಚೇರಿಗೆ ತೆರಳಿ ಗ್ರಾಮದ ಹೆಸರು ಬದಲಾವಣೆಗೆ ಆಕ್ಷೇಪ ಸಲ್ಲಿಸಿದರು. ತಹಶೀಲ್ದಾರ್ ಹಾಗೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದರು.

ಸುಮಾರು 40 ವರ್ಷದಿಂದ ಅಯ್ಯಪ್ಪ ಕಾಲೋನಿ ಎಂಬದಾಗಿಯೇ ಹೆಸರು ನಮೂದಾಗಿದೆ. ನಮ್ಮ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ದಾಖಲೆಗಳಲ್ಲಿ ಇದೇ ಹೆಸರಿದ್ದು, ಹೊಸದಾಗಿ ಗ್ರಾಮದ ಹೆಸರು ಬದಲಾವಣೆ ಮಾಡಿದರೆ ಎಲ್ಲದಕ್ಕೂ ಸಮಸ್ಯೆಯಾಗಲಿದೆ. ಮಕ್ಕಳ ವಿದ್ಯಾಭ್ಯಾಸದ ದಾಖಲೆಗಳನ್ನು ಹೊಂದಿಕೊಳ್ಳಲೂ ಸಹ ತೊಡಕಾಗುತ್ತದೆ ಎಂದ ಗ್ರಾಮಸ್ಥರು, ಸಂಜೆ ನಡೆಯಬೇಕಿರುವ ಕಾರ್ಯ ಕ್ರಮಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.

ಹಕ್ಕುಪತ್ರ ಕೊಡಿಸುತ್ತೇವೆ ಎಂದು ಗ್ರಾಮಸ್ಥರಿಂದ ಪಡೆದ ಸಹಿಯನ್ನು ಈ ಉದ್ದೇಶಕ್ಕೆ ಕೆಲವರು ಬಳಸಿಕೊಂಡು ತಮ್ಮ ಅರಿವಿಗೆ ಬಾರದಂತೆ ಗ್ರಾಮದ ಹೆಸರು ಬದಲಾಯಿಸಲು ಹೊರಟಿದ್ದಾರೆ. ಈ ಬಗ್ಗೆ ಗ್ರಾಮದ ಯಾವ ಸಭೆಯಲ್ಲೂ ಚರ್ಚೆಯೇ ಆಗಿಲ್ಲ. ಕೆಲವರು ಯಾರ ಗಮನಕ್ಕೂ ತಾರದೇ ಇಂತಹ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ತಕ್ಷಣ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯಕ್ರಮವನ್ನು ನಿಲ್ಲಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು.

ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್, ಅಯ್ಯಪ್ಪ ಕಾಲೋನಿಯಲ್ಲಿ 110 ಕುಟುಂಬಗಳಿದ್ದು 90 ಸಹಿಯನ್ನು ಹೊಂದಿರುವ ಮನವಿ ಪತ್ರವನ್ನು ಪಂಚಾಯಿತಿಗೆ ಸಲ್ಲಿಸಲಾಗಿತ್ತು. ನಿನ್ನೆ ದಿನ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಿ ಗ್ರಾಮಸ್ಥರ ಬೇಡಿಕೆಯಂತೆ ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಇದರೊಂದಿಗೆ 30 ದಿನಗಳ ಒಳಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ನೋಟೀಸ್ ಅಳವಡಿಸಲು ಕ್ರಮ ಕೈಗೊಳ್ಳಲಾಗಿತ್ತು ಎಂದರು.

ಆದರೆ ಇಂದು ಪಂಚಾಯಿತಿ ಯಿಂದ ಯಾವದೇ ಅನುಮತಿ ಪಡೆಯದೇ ನೂತನ ನಾಮಫಲಕ ಅಳವಡಿಸಲಾಗಿದೆ. ಈ ಬಗ್ಗೆ ಸುಮಾರು 30ಕ್ಕೂ ಅಧಿಕ ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದು, ಅದರಂತೆ ಕಾರ್ಯಕ್ರಮಕ್ಕೆ ಅವಕಾಶ ನೀಡಿಲ್ಲ. ಗ್ರಾಮದ ಹೆಸರು ಬದಲಾವಣೆ ಮಾಡುವ ಅಧಿಕಾರ ಜಿಲ್ಲಾಧಿಕಾರಿ ಗಳಿಗೆ ಮಾತ್ರವಿದ್ದು, ಅವರ ಆದೇಶ ದಂತೆ ಮುಂದಿನ ಕ್ರಮ ಕೈಗೊಳ್ಳ ಲಾಗುವದು ಎಂದು ತಿಳಿಸಿದ್ದಾರೆ.