ಗೋಣಿಕೊಪ್ಪ ವರದಿ, ನ. 24: ವಿದ್ಯಾವಂತ ಯುವ ಸಮೂಹ ಉದ್ಯೋಗ ಪಡೆದುಕೊಳ್ಳಲು ಸರ್ಕಾರ ಪೂರಕ ಮಾಹಿತಿ ಕೇಂದ್ರವನ್ನು ಸ್ಥಾಪಿಸುವ ಅವಶ್ಯಕತೆ ಇದೆ ಎಂದು ಮಾಜಿ ಶಾಸಕ ಅರುಣ್ ಮಾಚಯ್ಯ ಅಭಿಪ್ರಾಯಪಟ್ಟರು.ಪೊನ್ನಪ್ಪಸಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವ ಕಾವೇರಿ ಪದವಿಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಯುವ ಜನತೆಗೆ ಸರ್ಕಾರದ ಎಲ್ಲಾ ಯೋಜನೆಗಳು ತಲಪಲು ಪೂರ್ವ ಸಿದ್ಧತೆಗಳು ನಡೆದಿಲ್ಲ. ವಿದ್ಯಾವಂತ ಯುವ ಸಮೂಹ ಉದ್ಯೋಗ ಪಡೆದುಕೊಳ್ಳಲು ಸರ್ಕಾರ ಪೂರಕ ಮಾಹಿತಿ ಕೇಂದ್ರವನ್ನು ಸ್ಥಾಪಿಸುವ ಅವಶ್ಯಕತೆ ಇದೆ. ವಿದ್ಯಾವಂತರು ಉದ್ಯೋಗದ ಅರಿವು ಪಡೆದುಕೊಳ್ಳಲಾಗದೆ ನಿರುದ್ಯೋಗದಿಂದ ಜೀವನವನ್ನು ಕಳೆದುಕೊಳ್ಳುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಯುವ ಪ್ರತಿಭೆಗಳು ತಮ್ಮ ಸಾಮಥ್ರ್ಯವನ್ನು ವಿವಿಧ ಕ್ಷೇತ್ರಗಳಲ್ಲಿ ಅನಾವರಣ ಪಡಿಸಬೇಕು. ವೇದಿಕೆ ಮೂಲಕ ಅವಕಾಶ ಸಿಗುವಾಗ ಪ್ರತಿಭೆಯನ್ನು ಸಮಾಜಕ್ಕೆ ನೀಡುವಂತಾಗಬೇಕು ಎಂದರು. ಕಾವೇರಿ ಎಜ್ಯುಕೇಷನ್ ಸೊಸೈಟಿ ಅಧ್ಯಕ್ಷ ಡಾ. ಎ.ಸಿ. ಗಣಪತಿ ಮಾತನಾಡಿ, ಮಾನವೀಯತೆಗೆ ಮಿಡಿಯುವ ಸೇವಾ ಭಾವನೆ ವಿದ್ಯಾರ್ಥಿ ಜೀವನದಲ್ಲಿ ಆರಂಭವಾಗಬೇಕು. ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ಗೋಣಿಕೊಪ್ಪ ಪ್ರೆಸ್‍ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿ, ಶಿಬಿರಗಳು ಭಾವನಾತ್ಮಕವಾಗಿ ಒಂದಾಗಿಸಲು ವೇದಿಕೆಯಾಗುತ್ತಿದೆ. ಇಲ್ಲಿ ಪಡೆಯುವ ಅನುಭವಗಳು ಬದುಕಿಗೆ ಪೂರಕ ಶಕ್ತಿ ನೀಡುವಂತಾಗಬೇಕು ಎಂದರು. ಈ ಸಂದರ್ಭ ಜಿ.ಪಂ. ಸದಸ್ಯ ಬಾನಂಡ ಎನ್. ಪೃಥ್ವಿ, ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್, ಪೊನ್ನಪ್ಪಸಂತೆ ಗ್ರಾ.ಪಂ. ಅಧ್ಯಕ್ಷೆ ಎಂ.ಎಂ. ಗುಲ್ಷಾದ್, ಮುಖ್ಯ ಶಿಕ್ಷಕಿ ಸುಶೀಲ, ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಉಪಸ್ಥಿತರಿದ್ದರು. ಯೋಜನಾಧಿಕಾರಿ ತಿರುಮಲಯ್ಯ ಪ್ರಾಸ್ತಾವಿಕ ಭಾಷಣ ಮಾಡಿದರು. ಚೆನ್ನನಾಯಕ ವಂದಿಸಿದರು.