ಕುಶಾಲನಗರ, ನ. 24: ಯುವಪೀಳಿಗೆ ದುಶ್ಚಟಗಳ ದಾಸರಾಗದಂತೆ ಎಚ್ಚರವಹಿಸುವದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಐಚೆಟ್ಟಿರ ನರೇನ್ ಸುಬ್ಬಯ್ಯ, ಕ್ರೀಡಾಂಗಣದ ಮಾಲೀಕ ಐಚ್ಚೆಟ್ಟಿರ ಸೋಮಯ್ಯ ಕರೆ ನೀಡಿದ್ದಾರೆ. ಸುಬ್ಬಯ್ಯ ಸೆಂಟರ್ ಫಾರ್ ಹ್ಯುಮಾನಿಟಿ ಅಂಡ್ ಎಕ್ಸಲೆನ್ಸ್ ಸಂಸ್ಥೆ ಆಶ್ರಯದಲ್ಲಿ ಗುಡ್ಡೆಹೊಸೂರಿನಲ್ಲಿ ನಿರ್ಮಾಣಗೊಂಡ ಐಎನ್‍ಎಸ್ ಸ್ಪೋಟ್ರ್ಸ್ ಸೆಂಟರ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ರೀಡೆಯ ಆಸಕ್ತಿ ಮೂಲಕ ದುಶ್ಚಟಗಳನ್ನು ದೂರಮಾಡಲು ಸಾಧ್ಯ ಎಂದರಲ್ಲದೆ ಉತ್ತಮ ಕ್ರೀಡಾಪಟುಗಳನ್ನು ಸೃಷ್ಟಿ ಮಾಡುವದು ತಮ್ಮ ಸಂಸ್ಥೆಯ ಉದ್ದೇಶವಾಗಿದೆ. ಇದರ ಸದುಪಯೋಗವನ್ನು ಯುವಪೀಳಿಗೆ ಪಡೆದುಕೊಂಡಲ್ಲಿ ತಮ್ಮ ಯೋಜನೆ ಈಡೇರಿದಂತಾಗುತ್ತದೆ ಎಂದರು. ತಮ್ಮ ಪುತ್ರ ನರೇನ್ ಸುಬ್ಬಯ್ಯ ನೆನಪಿಗಾಗಿ ಸುಮಾರು 10 ಎಕರೆ ಜಾಗದಲ್ಲಿ ನಿರ್ಮಾಣಗೊಂಡಿರುವ ಕ್ರೀಡಾ ಸಮುಚ್ಚಯದಲ್ಲಿ ಫುಟ್ಬಾಲ್ ಮೈದಾನ, ಕಾಂಕ್ರೀಟ್ ಮತ್ತು ಮ್ಯಾಟ್ ಅಳವಡಿಸಿದ ಕ್ರಿಕೆಟ್ ಪಿಚ್ ಹಾಗೂ ಅಂತರಾಷ್ಟ್ರೀಯ ಮಾನದಂಡ ಹಾಗೂ ಗುಣಮಟ್ಟ ಹೊಂದಿರುವ ಷಟಲ್ ಬ್ಯಾಡ್ಮಿಂಟನ್ ಕೋರ್ಟ್ ಹೊಂದಿದೆ ಎಂದು ಮಾಹಿತಿ ನೀಡಿದರು. ಕ್ರೀಡಾ ಆಸಕ್ತರಿಗೆ ತರಬೇತಿ ನೀಡಲು ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪರಿಣಿತರಾದ ಕೋಚ್‍ಗಳನ್ನು ನೇಮಿಸಲಾಗಿದೆ ಎಂದರು.

ಭಾರತೀಯ ಕ್ರಿಕೆಟ್ ಪ್ರಾಧಿಕಾರದ ಸಹಕಾರವೂ ಕೇಂದ್ರಕ್ಕೆ ಲಭಿಸುತ್ತಿದ್ದು ಮುಂದಿನ ದಿನಗಳಲ್ಲಿ ಜಿಲ್ಲೆಯಿಂದ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಹೊರಹೊಮ್ಮುವ ಭರವಸೆ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ತಂಡ ಷಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗೆ ಚಾಲನೆ ನೀಡುವ ಮೂಲಕ ಒಳಾಂಗಣ ಕ್ರೀಡಾಂಗಣಕ್ಕೆ ಚಾಲನೆ ನೀಡಲಾಯಿತು.

ಕುಶಾಲನಗರ ಡಿವೈಎಸ್ಪಿ ಮುರಳೀಧರ್ ಕ್ರಿಕೆಟ್ ಪಿಚ್‍ನಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು. ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಫುಟ್ಬಾಲ್ ಮೈದಾನವನ್ನು ಲೋಕಾರ್ಪಣೆ ಮಾಡಿದರು.

ಈ ಸಂದರ್ಭ ನಡೆದ ಸರಳ ಸಮಾರಂಭದಲ್ಲಿ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ಐ.ಎಸ್.ಪೊನ್ನಪ್ಪ, ರಾಜ್ಯ ಪ್ರತಿನಿಧಿ ಪಿ.ಕೆ.ಜಗದೀಶ್, ಬೆಳೆಗಾರ ಎಂ.ಕೆ. ನಂಜಪ್ಪ, ಫುಟ್ಬಾಲ್ ಅಸೋಸಿಯೇಷನ್ ರಾಜ್ಯ ಪ್ರತಿನಿಧಿ ಮಿಲನ್ ಅಯ್ಯಪ್ಪ, ಕ್ರಿಕೆಟ್ ಅಕಾಡೆಮಿಯ ಶ್ರೀಕಾಂತ್, ಶರತ್ ಕಾಮತ್, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ್ ಕುಟ್ಟಪ್ಪ ಉಪಸ್ಥಿತರಿದ್ದು ಸಂಸ್ಥೆಗೆ ಶುಭಾಶಯ ಕೋರಿದರು.

ಈ ಸಂದರ್ಭ ಸಂಸ್ಥೆಯ ಆಯೋಜಕರಾದ ಐಚೆಟ್ಟಿರ ಪೊನ್ನಪ್ಪ ಹಾಗೂ ಕುಟುಂಬ ಸದಸ್ಯರು ಇದ್ದರು.