ಮಡಿಕೇರಿ, ನ. 24: ತಾಲೂಕು ರಚನೆ ಹೋರಾಟವನ್ನು ಬೆಂಬಲಿಸಿರುವ ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ)ವು ಬೇಡಿಕೆಯನ್ನು ಈಡೇರಿಸುವಂತೆ ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ.ಕೊಡಗು ಜಿಲ್ಲೆಯಲ್ಲಿ ಮೂರು ತಾಲೂಕುಗಳಿವೆ. ಈ ತಾಲೂಕುಗಳು ರಚನೆಯಾಗಿ ದಶಕಗಳೇ ಕಳೆದಿವೆ. ಈಗ ಜನಸಂಖ್ಯೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಹೊಸ ತಾಲೂಕುಗಳ ರಚನೆಗಳ ಬೇಡಿಕೆ ನ್ಯಾಯಬದ್ಧವಾಗಿದ್ದು, ಆಡಳಿತಾಧಿಕಾರವನ್ನು ಹೆಚ್ಚಾಗಿ ಜನರ ಕೈಗೆ ಕೊಡುವದು ನಾಡಿನ ಅಭಿವೃದ್ಧಿಗೆ ಪೂರಕವಾಗಿದೆ.

ಕೊಡಗಿನಲ್ಲಿ ಕಾವೇರಿ ತಾಲೂಕು ಎಂದು ಕರೆಯಲಾಗಿರುವ ಕುಶಾಲನಗರ ತಾಲೂಕು ಮತ್ತು ಪೊನ್ನಂಪೇಟೆ ತಾಲೂಕಿನ ರಚನೆಯ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಕಳುಹಿಸಲು 2008ರಲ್ಲೇ ಕೊಡಗಿನ ಜಿಲ್ಲಾಡಳಿತ ತೀರ್ಮಾನಿಸಿತ್ತು. ನಾಪೋಕ್ಲು ತಾಲೂಕಿನ ರಚನೆಗಾಗಿ ಅಂದೇ ಬೇಡಿಕೆ ಮಂಡಿಸಲಾಗಿತ್ತು. ಕಾವೇರಿ ತಾಲೂಕಿಗಾಗಿ ಹೋರಾಟ ಆರ್. ಗುಂಡೂರಾವ್ ಅವರ ನೇತೃತ್ವದಲ್ಲಿ 23.04.1993ರಂದೇ ಪ್ರಾರಂಭವಾಗಿತ್ತು. ಈ ತಾಲೂಕಿಗಾಗಿ ಹೋರಾಟ ಪ್ರಾರಂಭವಾಗಿ ಎರಡು ದಶಕಗಳೇ ಕಳೆದಿವೆ. ಕಳೆದ 10 ವರ್ಷಗಳಲ್ಲಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಸರಕಾರಗಳು ಕೊಡಗಿನ ಈ ನ್ಯಾಯಯುತವಾದ ಬೇಡಿಕೆಗೆ ಮನ್ನಣೆ ಕೊಡದೆ ಅದು ನೆನೆಗುದಿಗೆ ಬಿದ್ದಿದೆ.

ಈಗ ಕಾವೇರಿ ತಾಲೂಕಿಗಾಗಿ ಹೋರಾಟ ತೀವ್ರಗೊಂಡಿದೆ. ಪಕ್ಷಾತೀತವಾದ ವೇದಿಕೆ ರಚನೆಯಾಗಿದ್ದು, ಸರಣಿ ಧರಣಿ ಕಾರ್ಯಕ್ರಮಗಳು, ಸಾರ್ವಜನಿಕ ಸಭೆ ನಡೆದಿದೆ. ತಾಲೂಕಿಗಾಗಿ ನಡೆಯುತ್ತಿರುವ ಈ ಹೋರಾಟ ನ್ಯಾಯಸಮ್ಮತವಾಗಿದ್ದು, ಸರಕಾರ ಈ ಬೇಡಿಕೆಯನ್ನು ತಕ್ಷಣವೇ ಅಂಗೀಕರಿಸಬೇಕೆಂದು ಪಕ್ಷ ಒತ್ತಾಯಿಸಿದೆ.

ಈ ಬೇಡಿಕೆಯ ಈಡೇರಿಕೆಗಾಗಿ ನಡೆಸುವ ಎಲ್ಲಾ ಕಾರ್ಯಕ್ರಮಗಳಿಗೆ ಪಕ್ಷ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದೆ. ಅಲ್ಲದೆ, ಪೊನ್ನಂಪೇಟೆ ಮತ್ತು ನಾಪೋಕ್ಲು ತಾಲೂಕುಗಳಿಗಾಗಿ ಇರುವ ಬೇಡಿಕೆಗಳು ನ್ಯಾಯಯುಕ್ತವಾಗಿದೆ ಎಂದು ಪಕ್ಷ ಮನವಿಯಲ್ಲಿ ತಿಳಿಸಿದೆ.