ಮಡಿಕೇರಿ, ನ.24 : ಸ್ವಾಯತ್ತ ಕೊಡವ ಲ್ಯಾಂಡ್ ಒಳಗೊಂಡಂತೆ ವಿವಿಧ ಹಕ್ಕೊತ್ತಾಯಗಳನ್ನು ಮುಂದಿರಿಸಿಕೊಂಡು ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ತಾ. 26 ರಂದು (ನಾಳೆ) ಮಡಿಕೇರಿಯಲ್ಲಿ 27ನೇ ವರ್ಷದ ‘ಕೊಡವ ನ್ಯಾಷನಲ್ ಡೇ’ ಸಮಾವೇಶ ನಡೆಯಲಿದೆ. ಕಾರ್ಯಕ್ರಮದಲ್ಲಿ ಅರ್ಥ ಶಾಸ್ತ್ರಜ್ಞರು ಹಾಗೂ ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್ ಸ್ವಾಮಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಗಾಂಧಿ ಮೈದಾನದಲ್ಲಿ ಅಂದು ಬೆಳಿಗ್ಗೆ 10.30 ಗಂಟೆಗೆ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ರಾಜಕೀಯ ಮುತ್ಸದ್ಧಿ ಡಾ| ಸುಬ್ರಮಣಿಯನ್ ಸ್ವಾಮಿ ಕೊಡವರ ಹಕ್ಕುಗಳ ಕುರಿತು ಪ್ರಸ್ತಾಪಿಸಲಿದ್ದಾರೆ. ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ಸೇರ್ಪಡೆ, ಕೊಡವ ತಕ್ಕ್ಗೆ ರಾಜ್ಯಾಂಗ ಭದ್ರತೆ ಮತ್ತು ಜಾಗತಿಕ ರಾಜಕೀಯ ವಿದ್ಯಾಮಾನದ ಬಗ್ಗೆ ವಿಚಾರ ಮಂಡನೆ ನಡೆಯಲಿದೆ ಎಂದರು.
ಗೌರವ ಅತಿಥಿಗಳಾಗಿ ಅಖಿಲ ಭಾರತ ವಿರಾಟ್ ಹಿಂದು ಸಂಗಮ್ ನ (ವಿ.ಹೆಚ್.ಎಸ್) ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಭಾಗವಹಿಸಲಿದ್ದಾರೆ. ಕೊಡವರ ಹಕ್ಕು ಮತ್ತು ಕೊಡಗಿನ ರಾಜಕೀಯ ವಿದ್ಯಮಾನದ ಬಗ್ಗೆ ಕಾಳಜಿ ವಹಿಸಿ ಡಾ|.ಸುಬ್ರಮಣಿಯನ್ ಸ್ವಾಮಿ ಆಗಮಿಸುತ್ತಿದ್ದು, ಜಿಲ್ಲೆಯ ಕೊಡವ ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ನಾಚಪ್ಪ ಮನವಿ ಮಾಡಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಗಾಂಧಿ ಮೈದಾನದವರೆಗೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಮೆರವಣಿಗೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮೂಕೊಂಡ ದಿಲೀಪ್, ಚಂಬಂಡ ಜನತ್ ಕುಮಾರ್, ಕಾಟುಮಣಿಯಂಡ ಉಮೇಶ್, ಪುಲ್ಲೆರ ಕಾಳಪ್ಪ ಹಾಗೂ ಕೂಪದಿರ ಸಾಬು ಉಪಸ್ಥಿತರಿದ್ದರು.