ಸೋಮವಾರಪೇಟೆ, ನ.23: ಕಳೆದ ಒಂದು ವಾರಗಳ ಕಾಲ ಇಲ್ಲಿನ ಸೋಮೇಶ್ವರ ದೇವಾಲಯದ ನಂಜಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಪುಷ್ಪಗಿರಿ ಜೇಸೀ ಸಪ್ತಾಹಕ್ಕೆ ವರ್ಣರಂಜಿತ ತೆರೆಬಿದ್ದಿತು. ಪ್ರತಿದಿನ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು ನಡೆದವು.
ಜೇಸಿ ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಮನೋಹರ್ ಅವರ ನೇತೃತ್ವದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. ಸಪ್ತಾಹದಲ್ಲಿ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ, ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ, ಬರವಣಿಗೆ ಸ್ಪರ್ಧೆ ನಡೆಯಿತು. ಜೇಸಿ ಮನೋಹರ್, ಸಂಪತ್, ಸರಸ್ವತಿ, ಭೂಮಿಕ, ಕಿಶೋರ್ ತಂಡದವರಿಂದ ಸಂಗಿತ ರಸಮಂಜರಿ ಕಾರ್ಯಕ್ರಮ ಎಲ್ಲರನ್ನು ರಂಜಿಸಿತು.
ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಚದುರಂಗ ಸ್ಪರ್ಧೆ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮೂಹ ನೃತ್ಯ ಸ್ಪರ್ಧೆ, ಜೇಸಿರೇಟ್ಸ್ ಕಾರ್ಯಕ್ರಮ, ಪ್ರಾಥಮಿಕ ಹಾಗು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ, ಮಹಿಳೆಯರಿಗೆ ಬೆಂಕಿ ಇಲ್ಲದೆ ಅಡುಗೆ ಮಾಡುವ ಸ್ಪರ್ಧೆ, ಹಾಗೂ ಜೇಸಿ ಅರುಣ್ ಕುಮಾರ್ ತಂಡದವರಿಂದ ಮಕ್ಕಳಿಗೆ ಪಿರಮಿಡ್ ಧ್ಯಾನ ತರಬೇತಿ ಸೇರಿದಂತೆ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಹರಪಳ್ಳಿ ರವೀಂದ್ರ ಪ್ರಾಯೋಜಕತ್ವದಲ್ಲಿ ಮಕ್ಕಳ ಮ್ಯಾರಥಾನ್ ನಡೆಯಿತು. ನಿಧಾನವಾಗಿ ಸೈಕಲ್ ಹಾಗೂ ಬೈಕ್ ಚಾಲಿಸುವ ಸ್ಪರ್ಧೆ, ಗ್ರೂಪ್ ಡ್ಯಾನ್ಸ್ ಕಾರ್ಯಕ್ರಮ ಜನರನ್ನು ರಂಜಿಸಿತು. ಜೇಸೀ ನಿಕಟಪೂರ್ವ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಎಂ.ಎ.ರುಬಿನಾ, ವಲಯಾಧ್ಯಕ್ಷ ಗಿರೀಶ್ ಸೇರಿದಂತೆ ಪದಾಧಿಕಾರಿಗಳು ಜೇಸೀ ಸಪ್ತಾಹದ ಯಶಸ್ಸಿಗೆ ಶ್ರಮಿಸಿದರು.