ವೀರಾಜಪೇಟೆ, ನ. 24: ಜಾತ್ಯತೀತ ಜನತಾದಳದ ಕಾರ್ಯ ಕರ್ತರು ಪರಸ್ಪರ ಭಿನ್ನಾಭಿಪ್ರಾಯ ಮರೆತು ಪಕ್ಷ ಸಂಘಟನೆಯಲ್ಲಿ ಕಾರ್ಯ ಮಗ್ನರಾಗಬೇಕು. ಬೂತ್ ಮಟ್ಟದಿಂದಲೇ ಸಂಘಟಿಸಲು ತಾಲೂಕು ಸಮಿತಿ ಕಾರ್ಯಾರಂಭ ಮಾಡಿದ್ದು, ತಾಲೂಕಿನ ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿವಿಧ ಮತಗಟ್ಟೆಗಳಲ್ಲಿ ಸಮಿತಿಯನ್ನು ರಚಿಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕೈ ಬಲಪಡಿಸಲು ಕೊಡಗಿನಿಂದ ಇಬ್ಬರನ್ನು ವಿಧಾನ ಸಭೆಗೆ ಕಳುಹಿಸಲು ಯತ್ನಿಸುವಂತೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಹೆಚ್. ಮತೀನ್ ಹೇಳಿದರು.
ಬಾಳೆಲೆಯ ಪಕ್ಷದ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹೋಬಳಿ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮತೀನ್ ಅವರು ಚುನಾವಣೆ ಸಮೀಪಿಸುತ್ತಿರುವದರಿಂದ ಪಕ್ಷದ ಸಂಘಟನೆಗೆ ಕಾರ್ಯಕರ್ತರು ಬದ್ಧರಾಗಿರಬೇಕು ಎಂದರು.
ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಕ್ಷೇತ್ರದಾದ್ಯಂತ ರಚಿಸಲಾಗುತ್ತಿರುವ ಮತಗಟ್ಟೆ ಸಮಿತಿಗಳು ಕುಮಾರಸ್ವಾಮಿ ನೇತೃತ್ವದ ಸರಕಾರದ ಸಾಧನೆಗಳನ್ನು ಮತದಾರರಿಗೆ ಅರಿವು ಮೂಡಿಸಿ ಭಾವನೆಗಳನ್ನು ಮತವನ್ನಾಗಿ ಪರಿವರ್ತಿಸುವ ಪ್ರಚಾರ ಕೈಗೊಳ್ಳಬೇಕು. ಮತಗಟ್ಟೆ ಸಮಿತಿಗಳ ಕಾರ್ಯ ವೈಖರಿಯಿಂದ ಪಕ್ಷದ ಬಲಿಷ್ಠ ಸಂಘಟನೆಗೆ ನೆರವಾಗಬೇಕು. ಪಕ್ಷದ ಕಾರ್ಯಕರ್ತರು ಸಮಿತಿಗಳೊಂದಿಗೆ ಸಹಕರಿಸುವಂತಾಗಬೇಕು ಎಂದು ಹೇಳಿದರು.
ಬಾಳೆಲೆ ವಿಭಾಗದ ಪಕ್ಷದ ಹಿರಿಯ ಕಾರ್ಯಕರ್ತರಾದ ಮಚ್ಚಮಾಡ ಮಾಚಯ್ಯ ಮಾತನಾಡಿ 1980 ರಿಂದ 2017 ರವರೆಗಿನ ಜನತಾದಳ ಪಕ್ಷ ನಡೆದು ಬಂದ ದಾರಿ, ಈಗಲೂ ಪಕ್ಷ ರಾಷ್ಟ್ರೀಯ ಪಕ್ಷಗಳಿಗಿಂತಲೂ ಮುನ್ನಡೆಯಲ್ಲಿದ್ದು ಮುಂದಿನ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಗೆ ಅವಕಾಶ ಮಾಡಿಕೊಡಲಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಅಡ್ಡೆಂಗಡ ಐ. ಸುಬ್ಬಯ್ಯ ವಹಿಸಿ ಮಾತನಾಡಿ, ಪಕ್ಷದ ಕಾರ್ಯಕರ್ತರು ಮುಂದಿನ ಚುನಾವಣೆ ಎದುರಿಸಲು ಸಿದ್ಧರಾಗುವಂತೆ ಕರೆ ನೀಡಿದರು. ಸಭೆಯಲ್ಲಿ ಹೋಬಳಿಯ ಪ್ರಮುಖರಾಗಿ ಮುಕ್ಕಾಟಿರ ಗಣೇಶ್ ಉತ್ತಯ್ಯ, ಎಂ.ಎ. ಅಕ್ಬರ್, ಮಾಪಂಗಡ ಮುದ್ದಪ್ಪ, ಎಂ.ಜಿ. ಅಪ್ಪಣ್ಣ, ಮಲಚೀರ ದೇವಯ್ಯ, ಚಿಮ್ಮಣಮಾಡ ಮೇದಪ್ಪ, ಶಿವ ನಂಜಪ್ಪ ಮಹಿಳಾ ಘಟಕದ ಬಿಎಸ್. ಜ್ಯೋತಿ ಮತ್ತಿತರ ಕಾರ್ಯಕರ್ತರು ಹಾಜರಿದ್ದರು.