ಮಡಿಕೇರಿ, ನ. 24: ಇಲ್ಲಿ ಸರಕಾರ ನೀಡುವ ಆರು ಕಾಸಿನ ಆಹಾರ ಪದಾರ್ಥಗಳಿಗೆ ಶಿಕ್ಷಣ ಸಂಸ್ಥೆ ಒಂದಿಷ್ಟು ಕಾಸು ಸೇರಿಸಿ ನಿತ್ಯ ನೂರಾರು ಮಕ್ಕಳಿಗೆ ಮನೆ ವಾತಾವರಣದೊಂದಿಗೆ ಅಚ್ಚುಕಟ್ಟಾದ ಮಧ್ಯಾಹ್ನ ಊಟ ಉಣಬಡಿಸುತ್ತಿರುವದು ವಿಶೇಷ. ಇದು ಇಲ್ಲಿನ ಪ್ರತಿಷ್ಠಿತ ಸಂತ ಜೋಸೆಫರ ಶಾಲೆಯ ದೃಶ್ಯ.

ಸಂತ ಜೋಸೆಫರ ಶಾಲೆಯಲೊಂದು ಅಡುಗೆ ಧಾಮ

ಕರ್ನಾಟಕ ಸರಕಾರದಿಂದ ಅನುದಾನಿತ ಕನ್ನಡ ಶಾಲೆಗಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟವನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಂಡಿರುವದಕ್ಕೆ ಬಹುಶಃ ಈ ವಿದ್ಯಾಸಂಸ್ಥೆ ಮಾದರಿಯೆನ್ನಬಹುದು. ಸಂತ ಜೋಸೆಫರ ಶಾಲೆಯಲ್ಲಿ ನಿತ್ಯ ಸುಮಾರು ಮೂರು ಸಾವಿರ ಪುಟಾಣಿಗಳು ವಿದ್ಯೆ ಕಲಿಯುತ್ತಿದ್ದಾರೆ.

ಈ ಪೈಕಿ ನಿತ್ಯ ಸುಮಾರು 950 ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ತಯಾರಾಗುತ್ತಿದೆ. ಶಿಕ್ಷಕರುಗಳ ಉಸ್ತುವಾರಿಯಲ್ಲಿ ಆರು ಮಂದಿ ಅಡುಗೆಯವರು, ಶಿಕ್ಷಣ ಇಲಾಖೆ ಕಲ್ಪಿಸಿರುವ ಆಧುನಿಕ ಆಹಾರ ತಯಾರಿಕ ವ್ಯವಸ್ಥೆಯಡಿ (ಸ್ಟೀಂ) ನಿತ್ಯ ಅನ್ನ ಹಾಗೂ ಶುಚಿ ರುಚಿ ಸೊಪ್ಪು - ತರಕಾರಿ ಪದಾರ್ಥಗಳ ಸಾಂಬಾರು ತಯಾರಿಸಿ ಉಣಬಡಿಸಲಾಗುತ್ತಿದೆ.

ಸರಕಾರಿ ಶಾಲೆಗಳ ಸಹಿತ ಎಲ್ಲ ಅನುದಾನಿತ ಕನ್ನಡ ಶಾಲೆಗಳಂತೆಯೇ ಈ ಶಾಲೆಗೂ ಅಕ್ಕಿ, ಬೇಳೆ, ಎಣ್ಣೆ ಹಾಗೂ ಉಪ್ಪು ಮತ್ತು ಹಾಲುಪುಡಿ ಇಲಾಖೆಯಿಂದ ಸರಬರಾಜುಗೊಳ್ಳುತ್ತಿದೆ. ಉಳಿದಂತೆ ಮೆಣಸುಪುಡಿ ಸಹಿತ ಸಾಂಬಾರು ಪದಾರ್ಥಗಳಿಗೆ ಇಲಾಖೆಯಿಂದ ನೀಡುವ ಅಲ್ಪ ಹಣಕ್ಕೆ ವಿದ್ಯಾಸಂಸ್ಥೆಯ ಶಿಕ್ಷಣ ವೃಂದ ಇನ್ನಷ್ಟು ಹಣ ಸೇರಿಸಿ, ಸಾಂಬಾರು ತಯಾರಿಸಿ ಮಕ್ಕಳಿಗೆ ಪೂರೈಸುತ್ತಿದೆ.

ಈ ಬಗ್ಗೆ ಸುಸಜ್ಜಿತ ಅಡುಗೆ ಮನೆ, ಆಹಾರ ಗೋದಾಮು, ತರಕಾರಿ ಇತ್ಯಾದಿಗೆ ಅಚ್ಚುಕಟ್ಟು ವ್ಯವಸ್ಥೆ ಕಲ್ಪಿಸುವದರೊಂದಿಗೆ ಆಯಾ ತರಗತಿಗಳಿಗೆ ನಿತ್ಯ ಅನ್ನ ಸಾಂಬಾರುಗಳನ್ನು ಸ್ಟೀಲ್ ಪಾತ್ರೆಗಳಲ್ಲಿ ತುಂಬಿಸಿ, ಮಕ್ಕಳು ತಮ್ಮ ತಮ್ಮ ತರಗತಿ ಶಿಕ್ಷಕರೊಂದಿಗೆ ಒಗ್ಗೂಡಿ ಊಟ ಮಾಡುತ್ತಾರೆ.

ನಿತ್ಯ ಊಟ ಮಾಡುವಾಗ ಶಿಕ್ಷಕರು ಮತ್ತು ಮಕ್ಕಳು ದೇವರನ್ನು ಪ್ರಾರ್ಥಿಸುತ್ತಾ ಎಲ್ಲರಿಗೂ ಒಳಿತಿಗಾಗಿ ಬೇಡಿಕೊಳ್ಳುವದು ಮತ್ತೊಂದು ವಿಶೇಷ. ಆಹಾರ ತಯಾರಿಕ ಘಟಕದಿಂದ ಪದಾರ್ಥಗಳನ್ನು ಇಟ್ಟುಕೊಳ್ಳುವದು, ಮಕ್ಕಳಿಗೆ ಪೂರೈಕೆ ಸೇರಿದಂತೆ ಇಲ್ಲಿ ಎಲ್ಲವು ಅಚ್ಚುಕಟ್ಟು. ಇಂದು ಈ ಶಾಲೆಗೆ ಮಧ್ಯಾಹ್ನದ ಬಿಸಿಯೂಟ ಸಂಬಂಧ ಅಕ್ಷರ ದಾಸೋಹ ಅಧಿಕಾರಿ ಪಾಂಡು ದಿಢೀರ್ ಭೇಟಿ ನೀಡಿ ಸಮಾಲೋಚಿಸಿದರು.

ಇಂಥ ಪ್ರತಿಷ್ಠಿತ ಶಾಲೆಯ ಶಿಕ್ಷಕರೂ ಸೇರಿದಂತೆ ಸರಕಾರದ ಈ ಯೋಜನೆ ಫಲಪ್ರದವಾಗಲು, ನಿತ್ಯ ಎಲ್ಲ ಬಿಸಿಯೂಟ ಜಾರಿಗೊಂಡಿರುವ ಶಾಲೆಗಳ ಶಿಕ್ಷಕರು ಸಾಂಬಾರು ತಯಾರಿಸಿ ಅನ್ನದೊಂದಿಗೆ ಉಣಬಡಿಸಲು ಎದುರಿಸುವ ಬವಣೆ ಮಾತ್ರ ನಮ್ಮನ್ನಾಳುವ ಸರಕಾರ ಅಥವಾ ಅಧಿಕಾರಿಗಳಿಗೆ ಅರ್ಥವಾಗದು. ಗರಿಷ್ಠ ರೂ. 2 ಸಾವಿರ ಮಾತ್ರ ಅಡುಗೆ ತಯಾರಿಸುವವರ ಮಾಸಿಕ ವೇತನವಾದರೆ, ಪ್ರತಿ ಮಗುವಿನ ತಲೆಗೆ 50 ರಿಂದ 85 ಪೈಸೆಯಲ್ಲಿ ಸೊಪ್ಪು, ತರಕಾರಿ, ಸಾಂಬಾರು ಪದಾರ್ಥ, ಹಾಲಿಗೆ ಸಕ್ಕರೆ ಇತ್ಯಾದಿ ಒದಗಿಸಬೇಕಿದೆ. ಇದು ಪರಿಸ್ಥಿತಿ...

ಮುಖ್ಯೋಪಾಧ್ಯಾಯಿನಿಯರಾದ ರೋಜಾ, ಅಂತೋಣಿಯಮ್ಮ, ಲೀಮ ಮತ್ತು ಸಿಬ್ಬಂದಿ ಮಕ್ಕಳಿಗೆ ತಯಾರಾಗುವ ಅಡುಗೆಯಲ್ಲಿ ಸ್ವಂತ ಶ್ರಮ ಹಾಕುತ್ತಾರೆ. ಸ್ವಚ್ಛತೆ ಹಾಗೂ ರುಚಿಯನ್ನು ಖುದ್ದು ಪರಿಶೀಲಿಸಿ ಬಳಿಕವಷ್ಟೇ ಮಕ್ಕಳಿಗೆ ಊಟಬಡಿಸುತ್ತಾರೆ. ಅಡುಗೆಯ ಸಿಬ್ಬಂದಿ ತರಬೇತಿ ಹೊಂದಿದ್ದು, ಮನೆ ಕೆಲಸಕ್ಕಿಂತ ಹೆಚ್ಚಾಗಿ ಶೃದ್ಧೆ ವಹಿಸುತ್ತಾರೆ.

‘ಮನೆಗೆ ಅಡುಗೆ ಸಾಮಗ್ರಿ ತರಲು ಮಾರುಕಟ್ಟೆಗೆ ಹೋಗದಿದ್ದರೂ, ಮಕ್ಕಳಿಗಾಗಿ ಖುದ್ದಾಗಿ ಹೋಗುತ್ತೇನೆ’ ಎಂದು ಸಿಸ್ಟರ್ ರೋಜಾ ಹೇಳುತ್ತಾರೆ. ಸರಕಾರ ನೀಡುವ ಹಣ ಸಾಲದಿದ್ದಾಗ ಶಾಲೆಯಿಂದಲೇ ವೆಚ್ಚ ಬರಿಸುತ್ತೇವೆ ಎಂದು ಹೇಳುತ್ತಾರೆ.

‘ಶಾಲೆಯಲ್ಲಿ ನೀಡುವ ಹಾಲು ಮತ್ತು ಊಟ ರುಚಿಯಾಗಿರುತ್ತದೆ. ಹೊಟ್ಟೆ ತುಂಬಾ ನೀಡುತ್ತಾರೆ’ ಎಂದು ವಿದ್ಯಾರ್ಥಿನಿ ರಷ್ಮಿ, ಸೋಮಣ್ಣ ತಂಡ ಸಂತಸದಿಂದ ಹೇಳುತ್ತಾರೆ.

ಅಡುಗೆ ಕಟ್ಟಡದ ಸ್ವಚ್ಛತೆ, ತರಕಾರಿ ಹಾಗೂ ಸಾಮಗ್ರಿ ಇರಿಸಿರುವ ಅಚ್ಚುಕಟ್ಟುತನ, ಮಿರುಗುವಂತಿರುವ ಪಾತ್ರೆಗಳ ಶುಭ್ರತೆ ಕೆಲಸದ ಮೇಲೆ ಶಾಲೆಗಿರುವ ಪ್ರೀತಿ ಮತ್ತು ಶೃದ್ಧೆಯನ್ನು ಸೂಚಿಸುತ್ತದೆ.

- ಶ್ರೀಸುತ