ಗೋಣಿಕೊಪ್ಪ ವರದಿ, ನ.24 : ಸಾಗಾಟ ಅನುಮತಿಗಿಂತ ಹೆಚ್ಚಿನ ಪ್ರಮಾಣದ ಮರದ ಹಲಗೆಗಳನ್ನು ಸಾಗಾಟ ಮಾಡುತ್ತಿದ್ದ ಆರೋಪದಡೀ ತಿತಿಮತಿ ವಲಯ ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.

ಕೇರಳದಿಂದ ಕೊಡಗು ಮೂಲಕ ಸಾಗಾಟ ಮಾಡುತ್ತಿದ್ದ ಸಂದರ್ಭ ತಿತಿಮತಿ ಆನೆಚೌಕೂರು ಗೇಟ್ ಬಳಿ ತಪಾಸಣೆ ಮಾಡುವ ಸಂದರ್ಭ ಹೆಚ್ಚುವರಿ ಪ್ರಮಾಣದ ಮರ ಸಾಗಾಟ ಪತ್ತೆಯಾಗಿದ್ದು, ಕೇರಳದ ಮೂವರು ಆರೋಪಿಗಳು, 12 ಚಕ್ರದ ಲಾರಿ ಹಾಗೂ ಮರದ ಹಲಗೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಚಾಲಕ ಪ್ರತೀಶ್, ವಾಸುದೇವ್ ಹಾಗೂ ಸ್ಯಾಬ್ ಬಂಧಿತ ಆರೋಪಿಗಳು. ಆರೋಪಿಗಳನ್ನು ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರಿಪಡಿಸಲಾಗಿದೆ.

ಘಟನೆ ವಿವರ : ಗುರುವಾರ ಸಂಜೆ ಕೇರಳದಿಂದ ಬೆಂಗಳೂರಿಗೆ ಸಾಗಾಟ ಮಾಡುತ್ತಿದ್ದ ಸಂದರ್ಭ ಆನೆಚೌಕೂರು ತಪಾಸಣಾ ಕೇಂದ್ರದಲ್ಲಿ ತಪಾಸಣೆ ಸಂದರ್ಭ ಹೆಚ್ಚಿನ ಪ್ರಮಾಣದ ಮರದ ತುಂಡುಗಳನ್ನು ಸಾಗಿಸುತ್ತಿರುವದು ಪತ್ತೆಯಾಗಿದೆ. 12 ಚಕ್ರದ ಲಾರಿಯಲ್ಲಿ ಬೀಟೆ, ತೇಗ ಹಾಗೂ ಜಂಗಲ್‍ವುಡ್ ಮರದ ಹಲಗೆಗಳನ್ನು ಸಾಗಿಸುತ್ತಿದ್ದರು. 15 ಘನ ಮೀಟರ್ ಸಾಗಿಸಲು ಅನುಮತಿ ಪಡೆದಿದ್ದರು. ಲಾರಿಯಲ್ಲಿ 3 ಮೀಟರ್ ಹೆಚ್ಚುವರಿಯಾಗಿ ಸಾಗಿಸುತ್ತಿದ್ದ ಆರೋಪದಲ್ಲಿ ಲಾರಿಯಲ್ಲಿದ್ದ ಪೂರ್ಣ ಪ್ರಮಾಣದ ಮರದ ಹಲಗೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸುಮಾರು 35 ಲಕ್ಷ ಮೌಲ್ಯದ ಲಾರಿ, 15 ಲಕ್ಷ ಮೌಲ್ಯದ ಮರ ಅರಣ್ಯ ಇಲಾಖೆ ವಶದಲ್ಲಿದೆ.

ಕಾರ್ಯಾಚರಣೆ ಸಂದರ್ಭ ಎಸಿಎಫ್ ಶ್ರೀಪತಿ, ತಿತಿಮತಿ ಆರ್‍ಎಫ್‍ಒ ಅಶೋಕ್, ಸಿಬ್ಬಂದಿ ಗಣಪತಿ, ದೇವರಾಜು, ಸಂಜು ಸಂತೋಷ್, ಉಮೇಶ್, ಸುರೇಶ್ ಹಾಗೂ ರಮೇಶ್ ಪಾಲ್ಗೊಂಡಿದ್ದರು.