ಕುಶಾಲನಗರ, ನ. 23: ವಿಶ್ವಾಸ, ನಂಬಿಕೆ, ಪ್ರೀತಿ, ಸಹೋದರತ್ವದಂತಹ ಜೀವನ ಮೌಲ್ಯಗಳು ಮರೆಯಾ ಗುತ್ತಿರುವ ಪ್ರಸಕ್ತ ಪರ್ವಕಾಲದಲ್ಲಿ ನೂತನ ಆದರ್ಶಗಳನ್ನು ವಿದ್ಯಾರ್ಥಿ ಸಮುದಾಯ ಕಂಡು ಹುಡುಕುವ ಅವಶ್ಯಕತೆಯಿದೆ ಎಂದು ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಪಿ.ಎಲ್. ಧರ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೋಬಳಿಯ ಚಿಕ್ಕ ಅಳುವಾರದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿನ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಜರುಗಿದ ರಾಜ್ಯಶಾಸ್ತ್ರ ಸಂಘದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವಿರಬೇಕು. ವಿದ್ಯಾರ್ಥಿಗಳು ಎಲ್ಲಾ ವಿಭಾಗದ ವಿಷಯಗಳನ್ನು ಸಾಧ್ಯವಾದಷ್ಟು ಅಧ್ಯಯನ ಮಾಡುವ ಮೂಲಕ ತಮ್ಮ ವ್ಯಕ್ತಿತವನ್ನು ರೂಢಿಸಿಕೊಳ್ಳಬೇಕು.

ವಿದ್ಯಾರ್ಥಿ ಸಮುದಾಯ ಸಮಾಜದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು, ವಿದ್ಯಮಾನಗಳನ್ನು ಸೂಕ್ಷ್ಮದೃಷ್ಟಿಯಿಂದ ಗಮನಿಸುವ, ಪರೀಕ್ಷಿಸುವ, ವಿಶ್ಲೇಷಿಸುವ, ವೈಜ್ಞಾನಿಕ ಓರೆಗಲ್ಲಿಗೆ ಹಚ್ಚಿ ಸತ್ಯಾಸತ್ಯತೆಯನ್ನು ಕಂಡುಕೊಳ್ಳುವ ಮನೋಭಾವ ಹೊಂದಿರಬೇಕು ಎಂದು ನುಡಿದರು.

ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕ ಡಾ. ಟಿ. ಕೇಶವಮೂರ್ತಿ ಉದ್ಘಾಟನೆ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿ ಜೀವನ ಒಂದು ಅಮೂಲ್ಯಘಟ್ಟ. ಜೀವನಕ್ಕೊಂದು ಗುರಿ ಇರಲಿ ಅದೆರೆಡೆಗೆ ಸಾಗುವ ಲಕ್ಷ್ಯವಿರಲಿ, ಅದಕ್ಕಾಗಿ ಸದಾ ಪರಿಶ್ರಮವಿರಲಿ. ಭ್ರಷ್ಟಾಚಾರ, ಅರಾಜಕತೆಯಂತಹ ಪ್ರಸ್ತುತ ಸ್ಥಿತಿಗತಿಗಳ ಕುರಿತು ವಿದ್ಯಾರ್ಥಿಗಳ ದೃಷ್ಟಿಕೋನ ವಾಸ್ತವಿಕತೆ ಕಡೆಗೆ ಹರಿಯಬೇಕು. ಪ್ರತಿಯೊಂದು ವಿಷಯದ ಕುರಿತು ಜ್ಞಾನ ಸಂಪಾದನೆ ಮಾಡುವದಷ್ಟೇ ಸೀಮಿತವಾಗಿರದೆ ವಿದ್ಯಾರ್ಥಿ ಜೀವನದಲ್ಲಿ ತಮ್ಮ ಮುಂದಿನ ಜೀವನ ಸುಭದ್ರ ಅಡಿಪಾಯ ಹಾಕುವ ದಿನಗಳಾಗಿದ್ದು, ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಬದುಕಿನ ಗುರಿ ಮುಟ್ಟಬೇಕು ಎಂದರು.

ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಉಪನ್ಯಾಸಕರುಗಳಾದ ಬಿ.ಎಸ್. ಮಮತ, ಸಿ.ಎಸ್. ತಾರಾ ಹಾಗೂ ಹೆಚ್.ಎಸ್. ವೆಂಕಟೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಂ.ಎ. ಸಲ್ಮಾ ನಿರೂಪಿಸಿ, ಮಂಜುನಾಥ ನಾಯಕ ಸ್ವಾಗತಿಸಿ, ರಾಜ್ಯಶಾಸ್ತ್ರ ಸಂಘದ ಉಪಾಧ್ಯಕ್ಷ ಡಿ.ಆರ್. ಗಿರೀಶ್ ವರದಿ ವಾಚಿಸಿದರು, ಹೆಚ್.ಜಿ. ಅನಿಲ್ ಕುಮಾರ್ ವಂದಿಸಿದರು.