ಸೋಮವಾರಪೇಟೆ, ನ. 24: ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು. ಕಾನೂನಿನ ಮೇಲೆ ಗೌರವ ಹಾಗೂ ಪಾಲನೆಯ ಬಗ್ಗೆ ಶಿಕ್ಷಕರು ಮತ್ತು ಪೋಷಕರು ತಿಳಿಹೇಳಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ್ ಎಫ್. ದೊಡ್ಡಮನಿ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಆಶ್ರಯದಲ್ಲಿ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ಬಾಲಾಪರಾಧ ನಿಷೇಧ ಮತ್ತು ಮಕ್ಕಳ ಹಕ್ಕುಗಳ ಕಾನೂನು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಬಹುತೇಕ ಮಕ್ಕಳಿಗೆ ಶಿಕ್ಷಕರೇ ಆದರ್ಶಪ್ರಾಯರಾಗಿರುತ್ತಾರೆ. ಈ ಕಾರಣದಿಂದ ಶಿಕ್ಷಕರು ಮಕ್ಕಳಲ್ಲಿ ಕಾನೂನಿನ ಅರಿವು ಮೂಡಿಸುವ ಜವಾಬ್ದಾರಿಯನ್ನೂ ಹೊರಬೇಕಾಗಿದೆ. ಬಾಲಾಪರಾಧ ತಡೆಯುವಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಪ್ರಮುಖವಾದುದು ಎಂದು ನ್ಯಾಯಾಧೀಶರು ನುಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿವಿಲ್ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಮಾತನಾಡಿ, ಅನಾಥ ಮಕ್ಕಳ ಶೋಷಣೆ ಹಾಗೂ ಬಾಲಕಾರ್ಮಿಕ ಪದ್ದತಿ ಕಂಡುಬಂದರೆ ಮಕ್ಕಳ ಸಲಹಾ ಕೇಂದ್ರ ಅಥವಾ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕು. 16 ರಿಂದ 18 ರ ಪ್ರಾಯದ ಬಾಲಕರು ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂಬದು ಅಂಕಿ ಅಂಶಗಳಿಂದ ತಿಳಿದು ಬಂದಿದ್ದು, ಬಾಲಾಪರಾಧಿಗಳು ಶಿಕ್ಷೆ ಅನುಭವಿಸ ಬೇಕಾಗಿರುವದರಿಂದ, ಯಾರೂ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಮಾತನಾಡಿ, ಭಾರತ ದೇಶದ ಕಾನೂನು ಬಲಿಷ್ಠವಾಗಿರುವದರಿಂದ, ಅಪರಾಧ ಮಾಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಪರಾಧ ಮುಕ್ತ ಬದುಕಿನಿಂದ ಸುಖೀ ಜೀವನ ಸಾಧ್ಯ. ಕಾನೂನಿಗೆ ಗೌರವ ಕೊಡದ ವ್ಯಕ್ತಿಗೆ ಈ ಸಮಾಜ ಕೂಡ ಗೌರವ ನೀಡುವದಿಲ್ಲ.
ವಿದ್ಯಾರ್ಥಿಗಳು ತಪ್ಪು ದಾರಿ ಹಿಡಿಯದಂತೆ ಶಿಕ್ಷಕರು ನೋಡಿ ಕೊಳ್ಳಬೇಕು. ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಎದುರು ತಮ್ಮ ದುಶ್ಚಟ ಗಳನ್ನು ತೋರ್ಪಡಿ ಸಬಾರದು ಎಂದು ಕಿವಿಮಾತು ಹೇಳಿ ದರು. 2015 ರಲ್ಲಿ ಬಾಲಾಪರಾಧ ಕಾಯ್ದೆ ಜಾರಿಗೆ ಬಂದಿದ್ದು, ಬಾಲಕರು ಅಪರಾಧ ಮಾಡಿದರೂ ಶಿಕ್ಷೆಯಿಂದ ಬಚಾವಾಗಲು ಸಾಧ್ಯವಿಲ್ಲ. ಬಾಲಾಪರಾಧ ನ್ಯಾಯಾಲಯದಲ್ಲೇ ವಿಚಾರಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಶಿಕ್ಷಕರಾದ ರಮೇಶ್ ಹಾಗೂ ಚಂದ್ರಕಲಾ ಕಾರ್ಯಕ್ರಮ ನಿರ್ವಹಿಸಿದರು.