ಗೋಣಿಕೊಪ್ಪಲು, ನ.23 : ತಿತಿಮತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಜನವರಿ ತಿಂಗಳಿನಲ್ಲಿ ನಡೆಯಲಿರುವದರಿಂದ ಜಿಲ್ಲಾ ಪಂಚಾಯ್ತಿಯ ಲಭ್ಯವಿರುವ ಅನುದಾನದಲ್ಲಿ 2 ಲಕ್ಷ ಅನುದಾನವನ್ನು ಶಾಲೆಯ ರಂಗ ಮಂದಿರ ನಿರ್ಮಾಣಕ್ಕೆ ನೀಡಿರುವದಾಗಿ ತಿತಿಮತಿ ಜಿ.ಪಂ. ಸದಸ್ಯೆ ಪಿ.ಆರ್. ಪಂಕಜ ಹೇಳಿದರು.
ಶಾಲೆಯ ಆವರಣದಲ್ಲಿ ಏರ್ಪಡಾಗಿದ್ದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪಿ.ಆರ್.ಪಂಕಜ ತಾನು ಓದಿರುವ ಶಾಲೆಗೆ ಅನುದಾನ ಬಿಡುಗಡೆ ಮಾಡುತ್ತಿರುವದು ಸಂತೋಷ ತಂದಿದೆ. ಇನ್ನಷ್ಟು ಅನುದಾನವನ್ನು ನೀಡುವ ಚಿಂತನೆ ಇದೆ ಎಂದ ಅವರು ಈ ಶಾಲೆಯಲ್ಲಿ ಬಡ ವಿದ್ಯಾರ್ಥಿಗಳು, ಪರಿಶಿಷ್ಟ ಜಾತಿ ವರ್ಗದ ಮಕ್ಕಳು ಹೆಚ್ಚಾಗಿ ಈ ಶಾಲೆಯನ್ನೇ ಅವಲಂಬಿಸಿದ್ದಾರೆ.
ಮತ್ತೋರ್ವ ಅತಿಥಿ ಮಾಜಿ ಸಚಿವೆ ಕಾಂಗ್ರೆಸ್‍ನ ಪ್ರಮುಖರಾದ ಸುಮಾವಸಂತ್ ಮಾತನಾಡಿ ತಮ್ಮ ತಂದೆಯವರಾದ ಮುದ್ದಪ್ಪ ಈ ಶಾಲೆಗಾಗಿ ಎರಡು ಏಕರೆಗೂ ಅಧಿಕ ಜಾಗವನ್ನು ದಾನವಾಗಿ ನೀಡಿದ್ದು ಈ ಶಾಲೆಯಲ್ಲಿ ನಾನು ವಿದ್ಯಾರ್ಜನೆ ಮಾಡಿದ್ದು ಸಾರ್ಥಕವಾಗಿದೆ. ಅದ್ದೂರಿಯಾಗಿ ಶತಮಾನೋತ್ಸವ ಆಚರಿಸುವ ನಿಟ್ಟಿನಲ್ಲಿ ಎಲ್ಲಾರು ಕೈಜೋಡಿಸಿದ್ದಾರೆ ಎಂದರು.
ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷರಾದ ಮಾಂಗೇರ ಪದ್ಮಿನಿ ಪೊನ್ನಪ್ಪ ಮಾತನಾಡಿ ಶತಮಾನೋತ್ಸವ ಸಂಭ್ರಮಕ್ಕೆ 40 ಸಾವಿರ ಅನುದಾನವನ್ನು ಬಿಡುಗಡೆ ಗೊಳಿಸುವದಾಗಿ ಭರವಸೆ ನೀಡಿದರು. ತಿತಿಮತಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವು ಕುಮಾರ್ ಮಾತನಾಡಿ ರಂಗ ಮಂದಿರ ನಿರ್ಮಾಣವಾಗಲು ಅನುದಾನ ಸಾಕಾಗುತ್ತಿಲ್ಲ. ಇದರಿಂದ 3 ಲಕ್ಷ ಅನುದಾನವನ್ನು ಪಂಚಾಯಿತಿ ನಿಧಿಯಿಂದ ನೀಡುವದಾಗಿ ಹೇಳಿದರು.
ಜನವರಿ ತಿಂಗಳ 15ರರೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಮನವಿ ಮಾಡಲಾಯಿತು.ಕಾರ್ಯಕ್ರಮದಲ್ಲಿ ತಾ.ಪಂ.ಸದಸ್ಯೆ ಆಶಾ ಜೇಮ್ಸ್, ಗ್ರಾ.ಪಂ.ಉಪಾಧ್ಯಕ್ಷೆ ಸಾವಿತ್ರಿ,ಸದಸ್ಯೆ ಶಾಂತಮ್ಮ,ಸಣ್ಣಯ್ಯ,ಬಸಮ್ಮ,ಪಿಡಿಓ ಪ್ರಭಾಕರ್, ಸ್ಥಳೀಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಚೆಪ್ಪುಡೀರ ರಾಮಕೃಷ್ಣ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಅಪ್ರೋಸ್, ಸ್ಥಳೀಯ ಮುಖಂಡರಾದ ಚೆಪ್ಪುಡೀರ ಕಾರ್ಯಪ್ಪ, ಮನು ನಂಜಪ್ಪ, ಡಾ.ಮದ್ಯಸ್ಥ,ಶಾಲಾ ಮುಖ್ಯ ಶಿಕ್ಷಕಿ ಪಾರ್ವತಿ ಸಿ.ಆರ್.ಪಿ. ರವಿ. ಮುಂತಾದವರು ಹಾಜರಿದ್ದರು. ಶಾಲಾ ಮುಖ್ಯೋಪಾದ್ಯಯರಾದ ಪಾರ್ವತಿ ಸ್ವಾಗತಿಸಿ ವಂದಿಸಿದರು.