ಮಡಿಕೇರಿ, ನ. 24 : ಜಿಲ್ಲಾ ಪಂಚಾಯಿತಿ, ಕೊಡಗು ತಾಲೂಕು ಯುವ ಒಕ್ಕೂಟ, ನೆಹರು ಯುವ ಕೇಂದ್ರ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಬಿಳಿಗೇರಿ ಗ್ರಾಮದ ಶ್ರೀ ಭಗವತಿ ಯುವಕ ಸಂಘದ 41ನೇ ವರ್ಷದ ಗ್ರಾಮೀಣ ಕ್ರೀಡಾಕೂಟ ನಡೆಯಿತು.
ಮೇಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಕೆ.ಜಯಂತಿ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಇವರು ಯುವಕ ಸಂಘಗಳು ಈ ರೀತಿಯ ಕ್ರೀಡಾಕೂಟವನ್ನು ಹಮ್ಮಿಕೊಳ್ಳು ವದರಿಂದ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.
ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾದ ಮಂಡುವಂಡ ಜೋಯಪ್ಪ ಮಾತನಾಡಿ ಕ್ರೀಡೋತ್ಸವದಲ್ಲಿ ಪುರುಷರು, ಮಹಿಳೆಯರು, ವಯಸ್ಕರು, ಯುವ ಸಮೂಹಕ್ಕೆ ಹಾಗೂ ಮಕ್ಕಳಿಗೆ ಪ್ರತ್ಯೇಕವಾಗಿ ಗ್ರಾಮೀಣ ಕ್ರೀಡಾಕೂಟ ವನ್ನು ಆಯೋಜಿಸಲಾಗಿದ್ದು ಪ್ರತಿಯೊಬ್ಬರೂ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕರೆಯನ್ನಿತ್ತರು.
ಸಂಘದ ಆಟದ ಮೈದಾನದಲ್ಲಿ ಕ್ರೀಡಾಕೂಟವನ್ನು ಆಯೋಜಿಸ ಲಾಗಿತ್ತು. ಶ್ರೀ ಭಗವತಿ ಯುವಕ ಸಂಘದ ಅಧ್ಯಕ್ಷರಾದ ಮಂಡುವಂಡ ಟಾಟಾ ದೇವಯ್ಯ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕ್ರೀಡಾಕೂಟದಲ್ಲಿ ಪುಟಾಣಿ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ, ಮಹಿಳೆಯರಿಗೆ , ಪುರುಷರಿಗೆ, ಬಾಲಕ-ಬಾಲಕಿಯರಿಗೆ , ವಯಸ್ಕರಿಗೆ ಓಟದ ಸ್ಪರ್ಧೆ, ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ ಪ್ರಥಮ ಬಹುಮಾನವನ್ನು ಪೈಕೇರ ಗಗನ್ ದ್ವಿತೀಯ ಬಹುಮಾವನ್ನು ಪ್ರಜಾರೀರ ರಕ್ಷಿತ್ ಪಡೆದುಕೊಂಡರು. ಪುರುಷರ ಹಗ್ಗಜಗ್ಗಾಟದ ಪ್ರಥಮ ಬಹುಮಾನವನ್ನು ಕಗ್ಗೋಡ್ಲು ಯಂಗ್ ಬಾಯ್ಸ್, ದ್ವಿತೀಯ ಬಹುಮಾನವನ್ನು ಶೀ ಭಗವತಿ ಯುವಕ ಸಂಘ ಪಡೆದುಕೊಂಡಿತು. ಮಹಿಳೆಯರ ಹಗ್ಗಜಗ್ಗಾಟದಲ್ಲಿ ಪ್ರಥಮ ಬಹುಮಾನವನ್ನು ಸರಸ್ವತಿ ಮಹಿಳಾ ಸಮಾಜ ಸಿ ಮತ್ತು ದ್ವಿತೀಯ ಬಹುಮಾನವನ್ನು ಸರಸ್ವತಿ ಮಹಿಳಾ ಸಮಾಜ ಬಿ ಪಡೆದುಕೊಂಡಿತು.
ಶ್ರೀ ಭಗವತಿ ಯುವಕ ಸಂಘದ ಏಳಿಗೆಗೆ ಸಾಕಷ್ಟು ಶ್ರಮಿಸಿರುವ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾದ ಮಂಡುವಂಡ ಜೋಯಪ್ಪರವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಡಿಕೇರಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ರಶ್ಮಿ ಕುಮುದ, ಮಡಿಕೇರಿ ತಾಲ್ಲೂಕು ಪಂಚಾಯಿತಿಯ ಮಾಜಿ ಸದಸ್ಯರಾದ ಸಾಬು ತಿಮ್ಮಯ್ಯ ಹಾಗೂ ಹಾಕತ್ತೂರು ಗ್ರಾಮ ಪಂಚಾಯತ್‍ನ ಮಾಜಿ ಅಧ್ಯಕ್ಷರಾದ ಕಾಂತ ಕಾವೇರಪ್ಪ, ಗ್ರಾ.ಪಂ ಸದಸ್ಯರಾದ ಪುಷ್ಪ ನಾಣಯ್ಯ, ವಾಣಿ ಚರ್ಮಣ, ಎಂ.ಕೆ.ನಾಚಪ್ಪ, ಫಿಯೂಸ್ ಪೆರೇರಾ, ಊರಿನ ಹಿರಿಯರಾದ ನಿವೃತ ಶಿಕ್ಷಕ ರಾಮ್ ಕುಮಾರ್, ಸಂಘದ ಉಪಾಧ್ಯಕ್ಷ ಪಿ.ಎ.ರಾಘವ, ಕಾರ್ಯದರ್ಶಿ ಬಿ.ಎನ್.ಪ್ರಸಾದ್ ಸಂಘದ ಮಾಜಿ ಅಧ್ಯಕ್ಷರಾದ ಉಮೇಶ್ ಅಪ್ಪಣ್ಣ ಉಪಸ್ಥಿತರಿದ್ದರು.
ಸಂಘದ ಮಾಜಿ ಅಧ್ಯಕ್ಷರಾದ ಮಂಜ್ಞೀರ ಉಮೇಶ್ ಅಪ್ಪಣ್ಣ ನೆರಿದಿದ್ದವರಿಗೆ ವಂದನಾರ್ಪಣೆಯನ್ನು ಸಲ್ಲಿಸಿದರು. ಇದೇ ಸಂದರ್ಭ ಅಂಗನವಾಡಿ ಮಕ್ಕಳಿಗೆ ಉಚಿತ ಸಮವಸ್ತ್ರ ಮತ್ತು ಅಂಗನವಾಡಿಗೆ ಪಾತ್ರೆ ಸ್ಟ್ಯಾಂಡನ್ನು ನೀಡಲಾಯಿತು.