ಸೋಮವಾರಪೇಟೆ,ನ.23: ಕೊಡಗು ಗೌಡ ಜನಾಂಗದ ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಇಂದಿನ ಯುವಜನಾಂಗ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ರೈತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೂಡಗದ್ದೆ ದಾಮೋದರ್ ಹೇಳಿದರು.

ಇಲ್ಲಿನ ಸಾಂದೀಪನಿ ಶಾಲಾ ಆವರಣದಲ್ಲಿ ಇಲ್ಲಿನ ಕೊಡಗು ಗೌಡ ಸಮಾಜದ ಆಶ್ರಯದಲ್ಲಿ ನಡೆದ ನಮ್ಮವರ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಪೋಷಕರು ತಮ್ಮ ಮಕ್ಕಳಿಗೆ ಶೈಕ್ಷಣಿಕವಾಗಿ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದ ಅವರು, ಕೊಡಗು ಗೌಡ ಸಮಾಜಕ್ಕೆ ಉದಾರವಾಗಿ 10ಸೆಂಟ್ ಜಾಗವನ್ನು ನೀಡುವ ಭರವಸೆ ಕೊಟ್ಟರು.

ಮಾಜಿ ಸೈನಿಕ ಕೋಚನ ವಸಂತ್ ಮಾತನಾಡಿ, ಸಮಾಜದ ಏಳಿಗೆಗೆ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದ ಅಗತ್ಯತೆ ಇದೆ. ಪ್ರತಿವರ್ಷ ಜನಾಂಗದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷರಾದ ಸೂದನ ಎನ್.ಸೋಮಣ್ಣ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಮುಕ್ಕಾಟಿ ಸಿ.ಚಂಗಪ್ಪ, ಕಾರ್ಯದರ್ಶಿ ದಂಡಿನ ರವಿ ಉತ್ತಯ್ಯ, ಖಜಾಂಚಿ ಕುದುಕುಳಿ ಆರ್.ಗಜೇಂದ್ರ, ನಿರ್ದೇಶಕರಾದ ಚಿಲ್ಲನ ಸಿ.ನಂದ, ಅಂಬ್ರಾಟಿ ಆರ್.ಭಾಸ್ಕರ, ಕುದುಕುಳಿ ಚಂದ್ರಕಲಾ ಬೋಜರಾಜ್, ಮೂಲೆಮಜಲು ಪೂರ್ಣಿಮಾ, ಸುಳೇಕೊಡಿ ವಿನುತ್ ಕುಮಾರ್, ನಂಗಾರು ಜಿ.ಕಿರಣ್, ಮಡ್ತಿಲ ಬಾಲಕೃಷ್ಣ, ಕೇನೇರ ಪೊನ್ನಪ್ಪ ಇದ್ದರು.

ಕಾರ್ಯಕ್ರಮದ ಅಂಗವಾಗಿ ಸಮಾಜದ ಮಕ್ಕಳು ಹಾಗೂ ಹಿರಿಯರಿಗೆ ವಿವಿಧ ಆಟೋಟಗಳನ್ನು ಏರ್ಪಡಿಸಲಾಗಿತ್ತು.