ಮಡಿಕೇರಿ, ನ. 25 : ಕ್ರೀಡೆಗಳು ಮನುಷ್ಯರ ಮಾನಸಿಕ ಹಾಗೂ ದೈಹಿಕ ಸಾಮಥ್ರ್ಯವನ್ನು ಹೆಚ್ಚಿಸುವದಲ್ಲದೆ ಆರೋಗ್ಯಕಾರಿ ಬೆಳವಣಿಗೆಗೆ ಸಹಕಾರಿ ಯಾಗಿದೆ ಎಂದು ಕಾರ್ಪೋರೇಷನ್ ಬ್ಯಾಂಕ್‍ನ ನಿವೃತ್ತ ಎ.ಜಿ.ಎಂ ತೋಟಂಬೈಲು ಮನೋಹರ್ ಅಭಿಪ್ರಾಯಪಟ್ಟಿದ್ದಾರೆ.

ಮರಗೋಡು ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್, ಮರಗೋಡು ಮತ್ತು ಹೊಸ್ಕೇರಿ ಗ್ರಾ.ಪಂ.ಗಳ ಸಹಯೋಗದಲ್ಲಿ, ಮರಗೋಡು ಭಾರತಿ ಜೂನಿಯರ್ ಕಾಲೇಜ್ ಆಟದ ಮೈದಾನದಲ್ಲಿ ನಡೆಯುತ್ತಿರುವ ಇಂಟರ್ ವಿಲೇಜ್ ಚಾಂಪಿಯನ್ ಶಿಪ್‍ಅನ್ನು ಉದ್ಘಾಟಿಸಿ ಮಾತನಾಡಿದರು.

ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ, ಸೋಲು, ಗೆಲುವಿಗಿಂತ ಮುಖ್ಯವಾಗಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮನೋಸ್ಥಿತಿಯನ್ನು ಬೆಳೆಸಿಕೊಳ್ಳುವದು ಸೂಕ್ತವೆಂದ ಅವರು, ಗ್ರಾಮೀಣ ಕ್ರೀಡಾಪಟುಗಳು ಕ್ರೀಡಾಶಾಲೆಗಳಿಗೆ ಸೇರುವದಾದರೆ ಸಹಕಾರ ನೀಡುವದಾಗಿ ಭರವಸೆ ನೀಡಿದರು.

ಬೆಂಗಳೂರು ಬಿಬಿಎಂಪಿಯ ನಿವೃತ್ತ ಜಂಟಿ ಆಯುಕ್ತ ಪಾಣತ್ತಲೆ ಆರ್. ಪಳಂಗಪ್ಪ ಮಾತನಾಡಿ, ಇಂದಿನ ವೇಗದ ಯುಗದಲ್ಲಿ ಪ್ರತಿಯೊಬ್ಬರು ಹೊರ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಒಂದೆಡೆ ಕಲೆತು ಕ್ರೀಡಾ ಕೂಟಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗು ತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಸ್ಥಳೀಯ ಗ್ರಾಮಸ್ಥರು ಅಂತರ್ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಿರುವದು ಇತರರಿಗೆ ಮಾದರಿಯಾಗಿದೆ ಎಂದರು.

ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಗ್ರಾಮೀಣ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳ ಬೇಕೆಂದು ಪಳಂಗಪ್ಪ ಕಿವಿಮಾತು ಹೇಳಿದರು.

ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಕಾಂಗಿರ ಸತೀಶ್, ಹೊಸ್ಕೇರಿ ಗ್ರಾ.ಪಂ. ಅಧ್ಯಕ್ಷೆ ಮಮತ, ಕೆ.ಎಸ್.ಎಫ್.ಸಿ ನಿವೃತ್ತ ಅಧಿಕಾರಿ ಮಳ್ಳಂದಿರ ಕೃಷ್ಣರಾಜು ಹಾಗೂ ಬೆಂಗಳೂರಿನ ಉದ್ಯಮಿ, ಮಾಜಿ ಕ್ರೀಡಾಪಟು ತೇನನ ರಾಜೇಶ್ ಮಾತನಾಡಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಕಾಫಿ ಬೆಳೆಗಾರರಾದ ಎಂ.ವಿ. ವಾಸುದೇವನ್, ನಂದೇಟಿರ ಸುಬ್ಬಯ್ಯ, ಉದ್ಯಮಿ ಹಾಗೂ ಬೆಳೆಗಾರ ಪೈಕೆರ ಮನೋಹರ ಮಾದಪ್ಪ, ರವಿಸುಬ್ಬಯ್ಯ, ದೇವಣಿರ ತಿಲಕ್ ಉಪಸ್ಥಿತರಿದ್ದರು.

ಹೊಸ್ಕೇರಿ ಮತ್ತು ಐಕೊಳ ತಂಡಗಳ ನಡುವಿನ ಮಹಿಳೆಯರ ವಾಲಿಬಾಲ್ ಹಾಗೂ ಪುರುಷರ ಫುಟ್ಬಾಲ್ ಪಂದ್ಯಾಟಗಳಿಗೆ ಮಾಜಿ ಸಚಿವ ಬಿ.ಎ. ಜೀವಿಜಯ ಚಾಲನೆ ನೀಡಿದರು.

ಮರಗೋಡು ಮತ್ತು ಕಟ್ಟೆಮಾಡು ತಂಡಗಳ ನಡುವಿನ ಫುಟ್ಬಾಲ್ ಪಂದ್ಯಾಟವನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಉದ್ಘಾಟಿಸಿದರು. ರಿಕ್ರಿಯೇಷನ್ ಕ್ಲಬ್‍ನ ಅಧ್ಯಕ್ಷ ಕೋಚನ ಲವಿನ್ ಸ್ವಾಗತಿಸಿ, ಸೋನಾಜಿತ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.