ಕುಶಾಲನಗರ, ನ. 25: ಕುಶಾಲನಗರ ಪಟ್ಟಣಕ್ಕೆ ಒಳಚರಂಡಿ ಕಲ್ಪಿಸುವ ಯೋಜನೆ ಕಾಮಗಾರಿ ಪ್ರಾರಂಭಗೊಂಡು 3 ವರ್ಷಗಳು ಕಳೆದರೂ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿದ್ದು ಪಟ್ಟಣದ ನೈರ್ಮಲ್ಯ ವ್ಯವಸ್ಥೆ ಏರುಪೇರಾಗು ವದರೊಂದಿಗೆ ಜೀವನದಿ ಕಾವೇರಿ ಕಲುಷಿತವಾಗುವದನ್ನು ತಡೆಗಟ್ಟುವ ಪ್ರಮುಖ ಪಾತ್ರ ವಹಿಸುವ ಯೋಜನೆಯೊಂದು ಇನ್ನೂ ಪೂರ್ಣಗೊಂಡಿಲ್ಲ.

ಕುಶಾಲನಗರ ಮತ್ತು ಗುಮ್ಮನ ಕೊಲ್ಲಿ, ಮುಳ್ಳುಸೋಗೆ ಗ್ರಾಮಗಳನ್ನು ಈ ಯೋಜನೆಯ ಅಂದಾಜು ಪಟ್ಟಿಯಲ್ಲಿ ಸೇರಿಸಲಾಗಿದ್ದು ಸುಮಾರು ರು 45 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಅನುಮೋದನೆ ದೊರೆತಿದೆ. ನಿಧಾನಗತಿಯಲ್ಲಿ ಸಾಗುತ್ತಿದ್ದ ಕಾಮಗಾರಿಯ ಯೋಜನೆ ಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೈಗೆತ್ತಿಕೊಂಡಿದ್ದು, 30 ತಿಂಗಳಲ್ಲಿ ಪೂರ್ಣಗೊಳಿಸಿ ಅನುಷ್ಠಾನ ಗೊಳಿಸಬೇಕಾಗಿತ್ತು. ಯೋಜನೆ ಪೂರ್ಣಗೊಳಿಸಬೇಕಾದ ಅವಧಿ ಜೂನ್-2017 ಕ್ಕೆ ಅಂತ್ಯ ಗೊಂಡಿದ್ದರೂ ಸ್ಥಳೀಯ ಆಡಳಿತಗಳ ಅಸಹಕಾರದಿಂದ ಯೋಜನೆ ಅಪೂರ್ಣಗೊಂಡಿದೆ ಎಂಬ ಆರೋಪಗಳು ಕೇಳಿಬಂದಿವೆ.

ಕುಶಾಲನಗರ ಪಟ್ಟಣದ ಮುಂದಿನ 25 ವರ್ಷಗಳ ಜನಸಂಖ್ಯೆ ಆಧಾರದಲ್ಲಿ ಯೋಜನೆಗೆ ಅಂದಾಜು ಪಟ್ಟಿ ತಯಾರಿಸಲಾಗಿತ್ತು. ಒಟ್ಟು 71.865 ಕಿ.ಮೀ. ಉದ್ದದ ಕೊಳವೆಗಳ ಒಳಚರಂಡಿ ಮಾರ್ಗ ಹೊಂದಿರುವ ಯೋಜನೆಯಲ್ಲಿ 2449 ಆಳ ಗುಂಡಿಗಳ ನಿರ್ಮಾಣ, 10 ಮೀ. ವ್ಯಾಸದ 3 ವೆಟ್‍ವೆಲ್ ನಿರ್ಮಾಣ, 300 ಮೀ. ಉದ್ದದ 300 ಮಿ.ಮಿ. ವ್ಯಾಸವುಳ್ಳ ಇಯರ್ ಕೊಳವೆ ಮಾರ್ಗ, ಎರಡು ಸೆಪ್ಟಿಕ್ ಟ್ಯಾಂಕ್ ನಿರ್ಮಾಣ, ಜನರೇಟರ್ ಕಟ್ಟಡ ನಿರ್ಮಾಣ, ಅತ್ಯಾಧುನಿಕ ತಂತ್ರಜ್ಞಾನವುಳ್ಳ ಮಲೀನ ನೀರು ಶುದ್ಧೀಕರಣ ಘಟಕ, 3 ಕಿ.ಮೀ. ಉದ್ದಕ್ಕೆ ಕುಶಾಲನಗರ ಬಳಿಯಿಂದ ವೆಟ್‍ವೆಲ್‍ಗೆ 11 ಕಿವ್ಯಾ ಸಾಮಥ್ರ್ಯದ ವಿದ್ಯುತ್ ಮಾರ್ಗ ಅಳವಡಿಸುವದು ಈ ಯೋಜನೆಯ ಪ್ರಮುಖ ಕಾಮಗಾರಿಯಾಗಿದೆ.

ಇದರೊಂದಿಗೆ 100 ಹೆಚ್‍ಪಿ ಸಾಮಥ್ರ್ಯದ 3 ಪಂಪ್‍ಸೆಟ್‍ಗಳು, 75 ಹೆಚ್‍ಪಿಯ 2, 50 ಹೆಚ್‍ಪಿಯ 2 ಹಾಗೂ 25 ಹೆಚ್‍ಪಿ ಸಾಮಥ್ರ್ಯದ 3 ಪಂಪ್‍ಸೆಟ್‍ಗಳನ್ನು ಘಟಕಗಳಿಗೆ ಅಳವಡಿಸಬೇಕಾಗಿದೆ. ಆದರೆ ಮುಳ್ಳುಸೋಗೆ ಗ್ರಾಮ ವ್ಯಾಪ್ತಿಯಲ್ಲಿ ಜಾಗದ ತಕರಾರು ಕಾರಣದಿಂದ ವೆಟ್‍ವೆಲ್ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ. ರೂ. 6.5 ಕೋಟಿ ವೆಚ್ಚದಲ್ಲಿ ಇದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳಬೇಕಾದ ಎಸ್‍ಟಿಪಿ ಘಟಕ ಕಾಮಗಾರಿ ಇನ್ನೂ ಪ್ರಾರಂಭಗೊಂಡಿಲ್ಲ. ಜಾಗದ ತಕರಾರನ್ನು ಸ್ಥಳೀಯ ಆಡಳಿತಗಳು ಸರಿಪಡಿಸಿ ತಮಗೆ ಜಾಗವನ್ನು ಹಸ್ತಾಂತರಿಸದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಒಳಚರಂಡಿ ಮಂಡಳಿಯ ಮಡಿಕೇರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನ ಕುಮಾರ್ ‘ಶಕ್ತಿ’ಗೆ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ. ತಕ್ಷಣ ಹಸ್ತಾಂತರಿಸಿದಲ್ಲಿ ತಮ್ಮ ಇಲಾಖೆ ಮೂಲಕ ಕಾಮಗಾರಿಯ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲು ಸಾಧ್ಯವಿದೆ ಎಂದು ತಿಳಿಸಿರುವ ಅವರು, 2018 ರ ಅಂತ್ಯದೊಳಗೆ ಕಾಮಗಾರಿ ಪೂರ್ಣ ಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಗಾಗಲೆ 71 ಕಿ.ಮೀ. ಉದ್ದದ ಕೊಳವೆ ಮಾರ್ಗ ಕಾಮಗಾರಿ ಸಂಪೂರ್ಣಗೊಂಡಿದ್ದು, ಉಳಿದಂತೆ 600 ಮೀ. ಉದ್ದದ ವ್ಯಾಪ್ತಿ ಯಲ್ಲಿ ಪೈಪ್‍ಲೈನ್ ಅಳವಡಿಸುವದು, ಎಸ್‍ಟಿಪಿ ಕಾಮಗಾರಿ ನಡೆಯ ಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ. ಗುತ್ತಿಗೆದಾರರಿಗೆ ರೂ. 35 ಕೋಟಿ ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಪ್ರಸಕ್ತ ಕುಶಾಲನಗರದ ಮತ್ತು ನೆರೆಯ ಗ್ರಾಮಗಳ ಕಲುಷಿತ ತ್ಯಾಜ್ಯಗಳು ಜೀವನದಿ ಕಾವೇರಿಗೆ ನೇರವಾಗಿ ಸೇರುತ್ತಿದ್ದು, ಈ ಮೂಲಕ ನೀರಿನ ಗುಣಮಟ್ಟ ಕೆಳದರ್ಜೆಗೆ ಇಳಿಯುವದರೊಂದಿಗೆ ನದಿ ನೀರು ಬಳಕೆಗೆ ಅಯೋಗ್ಯ ಎನ್ನುವ ಆತಂಕಕಾರಿ ವರದಿಗಳು ಹೊರಬಿದ್ದಿದೆ. ಜಿಲ್ಲೆಯಲ್ಲಿ ಕಾವೇರಿ ನದಿ ಸಂರಕ್ಷಣಾ ಕಾರ್ಯ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾದ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆ ಕಾಮಗಾರಿಗಳು ಆದಷ್ಟು ಬೇಗನೆ ಪೂರ್ಣಗೊಳಿಸಿ ನದಿ ಸಂರಕ್ಷಣೆ ಮಾಡುವಂತೆ ಕಾವೇರಿ ನದಿ ಸ್ವಚ್ಛತಾ ಆಂದೋ ಲನ ಸಮಿತಿ ಜಿಲ್ಲಾಡಳಿತವನ್ನು ಆಗ್ರಹಿಸಿದೆ. - ಚಂದ್ರಮೋಹನ್