ಮಡಿಕೇರಿ, ನ.25 : ಮಕ್ಕಳನ್ನು ಭವಿಷ್ಯದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಕರ್ತವ್ಯ ಶಿಕ್ಷಕರು ಹಾಗೂ ಪೋಷಕರ ಮೇಲಿದ್ದು, ಬಾಲ್ಯದಿಂದಲೇ ಶಿಸ್ತಿನಿಂದ ಬೆಳೆಸಬೇಕು ಎಂದು ಮಾತಂಡ ಎಂ. ಚಂಗಪ್ಪ ಅಭಿಪ್ರಾಯಪಟ್ಟರು.

ಸಿಐಎಸ್‍ಸಿಇ ನ್ಯೂ ಡೆಲ್ಲಿ ಮತ್ತು ಮಡಿಕೇರಿ ಕೊಡವ ಸಮಾಜ ಸಂಯುಕ್ತಾಶ್ರಯದಲ್ಲಿ ನಡೆದ ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಕೊಡವ ಸಮಾಜ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಮಾತನಾಡಿ, ಶಾಲೆಗೆ ಆಟದ ಮೈದಾನದ ಕೊರತೆ ಇರುವ ಕಾರಣ ಮೈಸೂರು ರಸ್ತೆಯಲ್ಲಿರುವ ಕೊಡವ ಸಮಾಜದ 6 ಎಕ್ರೆ ಜಾಗದಲ್ಲಿ ಸ್ವಲ್ಪ ಜಾಗವನ್ನು ಮಕ್ಕಳಿಗೆ ಆಟದ ಮೈದಾನ ಮಾಡಲು ಬಿಟ್ಟುಕೊಡಲಾಗುವದು. ಶಾಲೆಯ ಆರ್ಥಿಕ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಉಂಟಾದರೆ ಶಾಲಾ ಸಭಾಂಗಣಕ್ಕೆ ಮೇಲ್ಚಾವಣಿ ಹಾಕಿಸಲು ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ಪೋಷಕರು, ಆಡಳಿತ ಮಂಡಳಿ ಸಹಕರಿಸಬೇಕೆಂದು ಕೋರಿದರು. ಶಾಲಾ ವಾಹನದ ಅವಶ್ಯಕತೆ ಇರುವದರಿಂದ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಈಗಾಗಲೇ ಒಂದು ಶಾಲಾ ಬಸ್ ಖರೀದಿಸಲು ತೀರ್ಮಾನಿಸಿದ್ದು, ಮುಂದಿನ ವರ್ಷದೊಳಗೆ ಕೊಂಡು ಕೊಳ್ಳಲಾಗುವದು ಎಂದರು.

ಶಾಲೆಯ ಪ್ರಾಂಶುಪಾಲೆ ಸರಸ್ವತಿ ಸುಬ್ಬಯ್ಯ ಶಾಲಾ ವರದಿ ಮಂಡಿಸಿದರು. ಈ ಸಂದರ್ಭ ಶಾಲೆಯ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಹೆಚ್ಚಿನ ಸಹಕಾರ ನೀಡಿದ ಇಂಜಿನಿಯರ್ ಶಿವಕುಮಾರ್ ಮತ್ತು ಗುತ್ತಿಗೆದಾರ ದಿನು ದೇವಯ್ಯ ಇವರುಗಳನ್ನು ಸನ್ಮಾನಿಸಲಾಯಿತು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಲೆಜಿಮ್ ನೃತ್ಯ ಹಾಗೂ ಜೂನಿಯರ್ ಮತ್ತು ಸೀನಿಯರ್ ತಂಡದವರ ಕರಾಟೆ, ಚಿಣ್ಣರ ನೃತ್ಯ ಪ್ರದರ್ಶನ ಸೇರಿದಂತೆ ಹಲವು ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಎಂ.ಇ. ಚಿಣ್ಣಪ್ಪ, ವಕ್ತಾರ ಸಿ.ಡಿ. ಕಾಳಪ್ಪ, ಕಾರ್ಯನಿರ್ವಾಹಕಿ ಎನ್.ಎ. ಪೊನ್ನಮ್ಮ, ಆಡಳಿತ ಮಂಡಳಿ ಸದಸ್ಯರು, ಕೊಡವ ಸಮಾಜ ಆಡಳಿತ ಮಂಡಳಿಯ ಪ್ರಮುಖರು ಉಪಸ್ಥಿತರಿದ್ದರು.