*ವೀರಾಜಪೇಟೆ, ನ. 25: ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಕಾಕೋಟುಪರಂಬು ಹಾಗೂ ಹಾಕಿ ಕೊಡಗು ಸಂಸ್ಥೆಯ ಸಹಯೋಗದಲ್ಲಿ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮ್ಯೆದಾನದಲ್ಲಿ ನಡೆಯುತ್ತಿರುವ 5ನೇ ವರ್ಷದ ಜಿಲ್ಲಾ ಮಟ್ಟದ ಹಾಕಿ ಪಂದ್ಯಾಟದಲ್ಲಿ ಆತಿಥೇಯ ಸ್ಪೋಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಕಾಕೋಟುಪರಂಬು ಹಾಗೂ ವೀರಾಜಪೇಟೆ ಕೊಡವ ಸಮಾಜ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ತಂಡಗಳು ಜಯ ಗಳಿಸಿದ್ದು ಫೈನಲ್ಸ್‍ಗೆ ಲಗ್ಗೆಯಿಟ್ಟಿದೆ.

ಮೊದಲ ಸೆಮಿ ಫೈನಲ್ಸ್‍ನಲ್ಲಿ ವೀರಾಜಪೇಟೆ ಕೊಡವ ಸಮಾಜ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ 4-3 ಗೋಲುಗಳಿಂದ ಮೂರ್ನಾಡು ಎಂಆರ್‍ಎಫ್ ತಂಡವನ್ನು ಪೆನಾಲ್ಟಿ ಶೂಟೌಟ್‍ನಲ್ಲಿ ಪರಾಭವಗೊಳಿಸಿತು. ಎರಡು ತಂಡಗಳು ಉತ್ತಮ ಪರಿಣಿತಿ ಹಾಗೂ ಯುವ ಆಟಗಾರರನ್ನು ಒಳಗೊಂಡಿದ್ದರೂ ಕೂಡ ಫೀಲ್ಡ್‍ನಲ್ಲಿ ಕೆಲವು ಸಣ್ಣ ಪುಟ್ಟ ತಪ್ಪುಗಳಿಂದ ಮೂರ್ನಾಡು ತಂಡ ಸೋಲಿಗೆ ಶರಣಾಗಬೇಕಾಯಿತು.

ನಿಗದಿತ ಅವಧಿಯಲ್ಲಿ 2-2 ಗೋಲುಗಳ ಸಮಬಲ ಸಾಧಿಸಿತು. ಪೆನಾಲ್ಟಿ ಶೂಟೌಟ್‍ನಲ್ಲಿ ಕೊಡವ ಸಮಾಜ ತಂಡ ಫೈನಲ್ಸ್ ಪ್ರವೇಶಿಸಲು ಅವಕಾಶ ಲಭಿಸಿತು. ಕೊಡವ ಸಮಾಜ ಪರ ಭರತ್ (5ನಿ), ಮಣಿಕಂಠ (36ನಿ), ಶೂಟೌಟ್ ನಲ್ಲಿ ಪವನ್ ಗೋಲಾಗಿ ಪರಿವರ್ತಿಸಿದರು. ಮೂರ್ನಾಡು ತಂಡದ ಪರ ಕುಮಾರ್ (17ನಿ), ಪುನಿತ್ (44ನಿ) ಶೂಟೌಟ್‍ನಲ್ಲಿ ಶಿವಾನಂದ್ ಗೋಲು ದಾಖಲಿಸಿದರು.

ದ್ವಿತೀಯ ಸೆಮಿ ಫೈನಲ್ಸ್‍ನಲ್ಲಿ ಅತಿಥೇಯ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಕಾಕೋಟುಪರಂಬು 1-0 ಗೋಲಿನಿಂದ ಅಮ್ಮತ್ತಿ ಈಗಲ್ಸ್ ತಂಡವನ್ನು ಸೋಲಿಸಿತು.

ಮೊದಲ ಹಾಗೂ ದ್ವಿತೀಯಾರ್ಧದಲ್ಲಿ ಮಂದಗತಿಯ ಆಟ ಪ್ರದರ್ಶಿಸಿದ ಕಾಕೋಟುಪರಂಬು ತಂಡ ತೃತೀಯಾರ್ಧದ 2ನೇ ನಿಮಿಷದಲ್ಲಿ ಬೆಳ್ಳಿಯಪ್ಪ (32ನಿ) ಬಾರಿಸಿದ ಮಿಂಚಿನ ಗೋಲಿನಿಂದ ಕಾಕೋಟುಪರಂಬು ತಂಡ ಮುನ್ನಡೆ ಕಾಯ್ದುಕೊಂಡಿತು. ಅತಿಥಿ ಆಟಗಾರ ಹರಿಯಾಣದ ಅಟಲ್ ಉತ್ತಮ ಗೋಲ್ ಕೀಪಿಂಗ್ ಮಾಡುವದರ ಮೂಲಕ ಕ್ರೀಡಾಪ್ರೇಮಿಗಳ ಗಮನ ಸೆಳೆದರು. ಅಮ್ಮತ್ತಿ ಈಗಲ್ಸ್ ತಂಡಕ್ಕೆ ಗೋಲು ಗಳಿಸಲು ಉತ್ತಮ ಅವಕಾಶಗಳಿದ್ದರೂ ಹೊಂದಾಣಿಕೆಯ ಕೊರತೆಯಿಂದ ಗೆಲುವಿನಿಂದ ವಂಚಿತರಾದರು.

ತೀರ್ಪುಗಾರರಾಗಿ ಮೂಳೆರ ಪೂವಯ್ಯ, ಚೈಯ್ಯಂಡ ಅಪ್ಪಚ್ಚು, ಚೋಯಮಾಡಂಡ ಚಂಗಪ್ಪ, ಮೂಕಚಂಡ ನಾಚಪ್ಪ ತಾಂತ್ರಿಕ ನಿರ್ದೇಶಕರಾಗಿ ಬುಟ್ಟಿಯಂಡ ಚಂಗಪ್ಪ ಕಾರ್ಯನಿರ್ವಹಿಸಿದರು.