ಗೋಣಿಕೊಪ್ಪಲು, ನ. 25: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸ ಲಾಗಿದ್ದ ಕವಿಗೋಷ್ಠಿ ಅಕ್ಕಮಹಾದೇವಿ ಸಂಸ್ಥಾನ ಪೀಠದ ನಿರ್ದೇಶಕಿ ಕವಿತಾ ರೈ ಚಾಲನೆ ನೀಡಿದರು.
ಇಲ್ಲಿನ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ವೇದಿಕೆಯಲ್ಲಿ ನಡೆದ 12ನೇ ವರ್ಷದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ನಿರ್ಗತಿಕರ, ಸಮಾಜದಲ್ಲಿ ಹಿಂದುಳಿದವರ, ಧಮನಿತರ ಪರ ಧನಿ ಎತ್ತಿದ ಚಿಂತಕಿ ಗೌರಿ ಲಂಕೇಶ್ ಅವರಿಗೆ ಕೊಂದವರ ಮಗಳಾಗಿ ಹುಟ್ಟಿ ಬಾ ಎಂಬ ಕವನ ಅರ್ಪಿಸಿದರು. ಅವರ ಧ್ಯೇಯೋದ್ದೇಶ, ಚಿಂತನೆ, ಕನಸುಗಳ ಚಿತ್ರಣವನ್ನು ಕವನದಲ್ಲಿ ಬಿಚ್ಚಿಡಲಾಯಿತು.
ಜಲಕಾಳಪ್ಪ ವಾಚಿಸಿದ ಹೂವಾಡಗಿತ್ತಿ ಕವನ ಹೂ ಮಾರಾಟಗಿತ್ತಿಯ ಬದುಕ ಬಿಂಬಿಸಿತು. ಕತ್ತಲಲ್ಲಿ ಅರಳಿದ ಮೌನ ಎಂಬ ಕವನವನ್ನು ರಾಣಿ ರವೀಂದ್ರ ವಾಚಿಸಿದರು. ನಾಗರಿಕರ ಅನಾಗರಿಕ ವರ್ತನೆಯ ಬಗ್ಗೆ ಕವನ ಬಿಂಬಿಸಿತು ಅಪಘಾತ, ಹೆಂಡತಿಯ ಶವ ಹೊತ್ತೊಯ್ದಾಗ ಫೋಟೋ ಕ್ಲಿಕ್ಕಿಸುವ ಸನ್ನಿವೇಶಗಳನ್ನು ಕವನದಲ್ಲಿ ಸೇರಿಸಲಾಗಿತ್ತು. ಮರೆಯಾಗುತ್ತಿರುವ ಮಾನವೀಯತೆ ಬಗ್ಗೆ ಜನರಲ್ಲಿ ಕವನ ಜಾಗೃತಿ ಮೂಡಿಸಿತು. ನಾ ಕನ್ನಡಿಗ ಟಾಮಿ ಥಾಮಸ್ ಎತ್ತ ಸಾಗುತ್ತಿದೆ ಎಂಬ ಕವನ ವಾಚಿಸಿ ವಲಸೆ ಹೋಗುತ್ತಿರುವ ಯುವಜನಾಂಗದಲ್ಲಿ ಜಾಗೃತಿ ಮೂಡಿಸಿದರು.
ಅಡುಗೆ ಮನೆಯಿಂದ ಮರೆಯಾಗುತ್ತಿರುವ ಅಡುಗೆಯ ಬಗ್ಗೆ ನೇಪಥ್ಯ ಎಂಬ ಸಂಗೀತ ರವಿರಾಜ್ ಅವರ ಕವನ ಬೆಳಕು ಚೆಲ್ಲಿತು. ಆಧುನೀಕರಣ ಅಡುಗೆಗಳ ಮಧ್ಯೆ ನಶಿಸುತ್ತಿರುವ ಆರೋಗ್ಯಕಾರಿ ಅಡುಗೆಯ ಉಪಯೋಗಗಳನ್ನು ಕವನ ಸಂದೇಶ ಸಾರಿತು. ಮಮತೆಯ ಒಡಲು ಎಂಬ ಕವನವನ್ನು ಜೀವಿತಾ ರವೀಂದ್ರ, ಯೋಧನ ಸ್ವಾಗತ ಕವನವನ್ನು ಮಾಲದೇವಿ ಮೂರ್ತಿ ವಾಚಿಸಿದರು.
ತನಗಾಗಿ ಏನಿದೆ ಎಂಬ ಕವನವನ್ನು ಚಾಲ್ರ್ಸ್ ಡಿಸೋಜ, ಕೃಪಾ ದೇವರಾಜ್ ಜನನ, ತುಳಸಿ ಕನ್ನಡದ ಕರೆ ಎಂಬ ಕವನ ವಾಚಿಸಿದರು. ಕಾಲ ಎಂಬ ಕವನವನ್ನು ವಿನೋದ್, ಹೋರಾಟ ಕವನವನ್ನು ರಂಜಿತಾ ಕಾರ್ಯಪ್ಪ ನನ್ನೂರು ಕವನವನ್ನು, ವಿ.ಟಿ ಶ್ರೀನಿವಾಸ್ ಕವಿಗಳ ಮೆರವಣಿಗೆ ಕವನವನ್ನು ಸುಲೇಮಾನ್, ವೃಕ್ಷಕ್ಕೆ ಬಿನ್ನಹ ಕವನವನ್ನು ಕೌಶಲ್ಯ ವಾಚಿಸಿದರು.
ಹಿರಿಯ ಸಾಹಿತಿ ನಾಗೇಶ್ ಕಾಲೂರು ಅಧ್ಯಕ್ಷತೆ ನುಡಿಯಲ್ಲಿ ಸಾಹಿತಿ ಕವಿತೆಯನ್ನು ಸೃಷ್ಟಿಸುವದರಲ್ಲಿ, ಸಾಹಿತ್ಯ, ಕವನಗಳನ್ನು ಸಾಹಿತಿ, ಕವಿಗಳನ್ನು ಸೃಷ್ಟಿಸುತ್ತವೆ. ಬರಹ, ಕಾವ್ಯಗಳನ್ನು ಓದುಗರು ಮೆಚ್ಚಿದರೆ ಮಾತ್ರ ಸಾಹಿತಿ ಗುರುತಿಸಲ್ಪಡುತ್ತಾನೆ ಎಂದು ಹೇಳಿದರು.
ಕವಿಗೋಷ್ಠಿಯಲ್ಲಿ ಕ.ಸಾ.ಪ. ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಸಾಹಿತಿಗಳಾದ ಸುನೀತಾ ಲೋಕೇಶ್, ಹಂಚೆಟ್ಟೀರ ಫ್ಯಾನ್ಸಿ ಮುತ್ತಣ್ಣ, ಜಿಲ್ಲಾ ಕಸಾಪ ನಿರ್ದೇಶಕ ಕಿಗ್ಗಾಲು ಗಿರೀಶ್, ಕಸಾಪ ಮಾಧ್ಯಮ ಕಾರ್ಯದರ್ಶಿ ಜಗದೀಶ್ ಜೋಡುಬೀಟಿ, ಅಶ್ವತ್ಥ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಕಡೇಮಾಡ ಕುಸುಮಾ ಜೋಯಪ್ಪ, ತಾಲೂಕು ಅಧ್ಯಕ್ಷರುಗಳಾದ ಮಧೋಶ್ ಪೂವಯ್ಯ, ಕುಡೆಕಲ್ ಸಂತೋಷ್ ಇದ್ದರು.
ಸಾಂಸ್ಕøತಿಕ ಮೆರುಗು
ಎರಡು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ದಿನವಿಡೀ ಸಾಂಸ್ಕøತಿಕ ಕಾರ್ಯಕ್ರಮಗಳು ರಸದೌತಣ ನೀಡಿದವು. ಸಭೆ, ಗೋಷ್ಠಿಗಳ ನಡು ನಡುವೆ ಸಮಾನಾಂತರ ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದು ಕಲಾಸಕ್ತರು, ಸಾಹಿತ್ಯಾಸಕ್ತರಿಗೆ ಬೋರ್ ಆಗದಂತೆ ರಂಜಿಸಿದವು.
ಜಿಲ್ಲೆಯಾದ್ಯಂತ ವಿವಿಧ ಶಾಲಾ-ಕಾಲೇಜುಗಳ ತಂಡ, ವಿವಿಧ ಸಂಘಟನೆಗಳ ಕಲಾವಿದರು ಕಲಾಪ್ರದರ್ಶನ ನೀಡಿದರು.
ರಾತ್ರಿ ವೇಳೆಯಲ್ಲೂ ಕೂಡ ಸಾಂಸ್ಕøತಿಕ ಕಾರ್ಯಕ್ರಮಗಳು ಮನರಂಜಿಸಿದವು. ವಿಧಾನಪರಿಷತ್ ಮಾಜಿ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತ್ರಿವೇಣಿ ಆಂಗ್ಲ ಮಾಧ್ಯಮ ಶಾಲೆಯ ಕಲಾತಂಡದವರಿಂದ ಮೂಡಿಬಂದ ರೂಪಕ ಕೊಡವ ಜನಾಂಗದ ಸಂಸ್ಕøತಿಯನ್ನು ಬಿಂಬಿಸಿತು. ಕೊಡಗು ಗೌಡ ಯುವ ವೇದಿಕೆಯ ಕಲಾತಂಡದಿಂದ ಮೂಡಿಬಂದ ತುಲಾ ಸಂಕ್ರಮಣ ವೈಭವ ಹಾಗೂ ಯೋಧರ ಜೀವನಾಧಾರಿತ ವೀರಚರಿತ್ರೆ ರೂಪಕ ಜನಮನ ಸೂರೆಗೊಂಡಿತು.