ಕುಶಾಲನಗರ, ನ. 25: ಕೊಡಗು ಸೈನಿಕ ಶಾಲೆಗೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪ್ರವೇಶ ಪಡೆಯುವ ನಿಟ್ಟಿನಲ್ಲಿ ಪ್ರಚಾರ ಕೈಗೊಳ್ಳಲಾಗುತ್ತಿದೆ ಎಂದು ಶಾಲೆಯ ಎನ್‍ಸಿಸಿ ಘಟಕದ ಪ್ರಮುಖರಾದ ಮಂಜಪ್ಪ ತಿಳಿಸಿದ್ದಾರೆ.

ಎನ್‍ಸಿಸಿ ದಿನಾಚರಣೆ ಅಂಗವಾಗಿ ಕುಶಾಲನಗರದ ಸರಕಾರಿ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಶಾಲೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.

ರಾಷ್ಟ್ರದ ಸೇನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ನೀಡಿರುವ ಕೊಡಗು ಜಿಲ್ಲೆಯಿಂದ ಸೈನಿಕ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯಬೇಕಾಗಿದೆ ಎಂಬ ಆಶಯ ಸಂಸ್ಥೆಯದ್ದಾಗಿದೆ ಎಂದು ಅವರು ತಿಳಿಸಿದರು. ಈ ಸಂದರ್ಭ ಮಾತನಾಡಿದ ಸೈನಿಕ ಶಾಲೆಯ ಎಂ.ಹೆಚ್. ಪ್ರಸಾದ್, ಪರಿಸರವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಸಂಸ್ಥೆಯ ವಿದ್ಯಾರ್ಥಿಗಳ ಮೂಲಕ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸೈನಿಕ ಶಾಲೆಯ ಎನ್‍ಸಿಸಿ ಘಟಕದ ಲೆಫ್ಟಿನೆಂಟ್ ಬಿಪಿನ್ ಕುಮಾರ್ ನೇತೃತ್ವದಲ್ಲಿ 190 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಕೂಡಿಗೆಯಿಂದ ಜಾಥಾ ಹೊರಟು ಸ್ಥಳೀಯ ಬಸ್ ನಿಲ್ದಾಣ ಮತ್ತು ಸುತ್ತಮುತ್ತ ಆವರಣದ ಶುಚಿತ್ವ ಕಾರ್ಯಕ್ರಮದಲ್ಲಿ ತೊಡಗಿಸಿ ಕೊಂಡರು. ನಾಗರಿಕರಲ್ಲಿ ರಾಷ್ಟ್ರಭಕ್ತಿ ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ತಂಡದಿಂದ ಕಾರು ನಿಲ್ದಾಣದ ಆವರಣದಲ್ಲಿ ಬೀದಿ ನಾಟಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಎನ್‍ಸಿಸಿ ಘಟಕದ ಪ್ರಮುಖರಾದ ವೈ.ವಿ. ರಮಣ, ಸುಬೇದಾರ್ ಪ್ರಮೋದ್ ತಿವಾರಿ, ಘೋಶ್, ಸಾಹೇಬ್ ಹುಸೇನ್, ಗೋವಿಂದರಾಜ್, ಅಶೋಕನ್, ದಾದ ಇದ್ದರು.